
ಬೆಂಗಳೂರು: ‘ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುವುದನ್ನು ತಡೆಯಲು 10ರಿಂದ12 ಬಾರಿ ಪ್ರಯತ್ನ ಮಾಡಿದ್ದರು. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿತು.
‘ನನಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್.ಮುದಗಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಶೇಷ ತನಿಖಾ ದಳದ (ಎಸ್‌ಐಟಿ) ಪರ ವಾದ ಮಂಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್, ‘ಪ್ರಜ್ವಲ್ ಕೃತ್ಯ ನಡೆಸಿ ದೇಶ ತೊರೆದಿದ್ದರು. ಸಂತ್ರಸ್ತೆಯರ ಜೊತೆಗಿನ ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ತನ್ನ ಫೋನ್ ಜರ್ಮನಿಯಲ್ಲಿ ಕಳೆದು ಹೋಗಿದೆ ಎಂದು ಹೇಳಿದ್ದಾರೆ. ಇದು ಅವರ ನಡತೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ಆಕ್ಷೇಪಿಸಿದರು.
‘ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವ ಪ್ರಜ್ವಲ್‌ನ ಅಜ್ಜ ಮಾಜಿ ಪ್ರಧಾನಿ. ಚಿಕ್ಕಪ್ಪ ಹಾಲಿ ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ. ತಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಮತ್ತು ಹಾಲಿ ಶಾಸಕ. ಕೃತ್ಯದ ಮಾಹಿತಿ ನೀಡಲು ಬಂದ ಸಂತ್ರಸ್ತೆಗೆ ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಯಾರೂಬ್ಬರೂ ಸೂಕ್ತ ನೆರವು ನೀಡಿಲ್ಲ. ಆರೋಪಿ ಅತ್ಯಂತ ಬಲಾಢ್ಯನಾಗಿರುವ ಕಾರಣದಿಂದಲೇ ಸಂತ್ರಸ್ತೆಯ ಧ್ವನಿಯನ್ನು ಹತ್ತಿಕ್ಕಲಾಗಿತ್ತು’ ಎಂದರು.
‘ಹಾಲಿ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ಮಂಜೂರು ಮಾಡಿದರೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಪ್ರಕರಣ ಎದುರಿಸುತ್ತಿರುವ ತಂದೆ ಎಚ್.ಡಿ.ರೇವಣ್ಣ ಮತ್ತು ತಾಯಿ ಭವಾನಿ ಅವರ ಜಾಮೀನು ಕೋರಿಕೆ ಮೇಲೆಯೂ ಪ್ರಭಾವ ಬೀರಲಿದೆ. ಜಾಮೀನು ಮಂಜೂರು ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟರೆ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗಲಿದೆ? ಹೀಗಾಗಿ, ಈ ಆರೋಪಿ ಜಾಮೀನಿಗೆ ಅರ್ಹ ಆಸಾಮಿಯಲ್ಲ’ ಎಂದರು. ಆಕ್ಷೇಪಣೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ನ.25) ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.