ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 15:44 IST
Last Updated 25 ಜುಲೈ 2025, 15:44 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ಮನೆಗೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಈ ಸಂಬಂಧ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಶುಕ್ರವಾರ ಪ್ರಕಟಿಸಿದರು.

‘ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಇವರ ಪುತ್ರ ಪ್ರಜ್ವಲ್‌ ರೇವಣ್ಣ 2019ರ ಜನವರಿ 1ರಿಂದ 2022ರ ಜನವರಿ 1ರ ಮಧ್ಯದ ಅವಧಿಯಲ್ಲಿ ಹಲವು ಬಾರಿ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಅವರ ಮನೆ ಕೆಲಸ ಮಾಡುತ್ತಿದ್ದ ಮಧ್ಯವಯಸ್ಸಿನ ಮಹಿಳೆ (47) ಮತ್ತು ಅವರ ಮಗಳು ಹೊಳೆನರಸೀಪುರ ಟೌನ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ADVERTISEMENT

ಇದರನ್ವಯ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ ಕಲಂ 154 (ಎ), 354 (ಡಿ), 506 ಮತ್ತು 509 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್‌ ಈಗಾಗಲೇ ಮಧ್ಯಂತರ ತಡೆ ನೀಡಿದೆ. ಪ್ರಾಸಿಕ್ಯೂಷನ್ ಪರ ಬಿ.ಎನ್‌.ಜಗದೀಶ್ ವಾದ ಮಂಡಿಸಿದ್ದರು.

ಪೋಕ್ಸೊ: ಸ್ವಇಚ್ಛೆ ಮದುವೆಗೆ ಸಮ್ಮತಿ 

‘ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಯುವಕನನ್ನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ’ ಎಂಬ ಸಂತ್ರಸ್ತ ವಯಸ್ಕ ತರುಣಿಯ ಹೇಳಿಕೆಯನ್ನು ಪರಿಗಣಿಸಿರುವ ಹೈಕೋರ್ಟ್‌ ಈ ಕುರಿತ ಪ್ರಕರಣದಲ್ಲಿ ಯುವಕನ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದೆ.

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಮಂದಿರದಲ್ಲಿ ಸಕ್ಷಮ ಪ್ರಾಧಿಕಾರದ ವಶದಲ್ಲಿದ್ದ ಯುವತಿ ಮತ್ತು ಆಕೆಯ ಚಿಕ್ಕಪ್ಪನನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರ ಚೇಂಬರ್‌ನಲ್ಲಿ ಖುದ್ದು ಹಾಜರುಪಡಿಸಿದ ವೇಳೆ ಯುವತಿ ಈ ಕುರಿತಂತೆ ನೀಡಿದ ಗೋಪ್ಯ ಹೇಳಿಕೆ ಮತ್ತು ದಾಖಲೆಯನ್ನು ನ್ಯಾಯಮೂರ್ತಿಗಳು ಪರಿಗಣಿಸಿದ್ದಾರೆ.

ವಿಚಾರಣೆ ವೇಳೆ ಸಂತ್ರಸ್ತ ಯುವತಿ, ‘ನಾನೀಗ ಸದ್ಯ ವಯಸ್ಕಳಾಗಿದ್ದೇನೆ. ಆರೋಪಿ ಯುವಕನ ಜೊತೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇನೆ. ಬಿ.ಕಾಂ ಪದವಿಯ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದೇನೆ’ ಎಂಬ ಪ್ರಮುಖ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ‘ಯುವತಿಯನ್ನು ತಕ್ಷಣವೇ ಬಾಲ ಮಂದಿರದಿಂದ ಬಿಡುಗಡೆ ಮಾಡಬೇಕು. ಆಕೆ ಇಚ್ಛಿಸಿದ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ಕಲ್ಪಿಸಬೇಕು’ ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

‘ಅರ್ಜಿದಾರ ಯುವಕ ಮತ್ತು ಸಂತ್ರಸ್ತೆ ವಿಚಾರಣಾ ನ್ಯಾಯಾಲಯದಲ್ಲಿ ಒಟ್ಟಾಗಿ ಭಾಗಿಯಾಗಬೇಕು ಎಂಬ ಷರತ್ತಿಗೆ ಒಳಪಟ್ಟು ಸಂತ್ರಸ್ತೆಯು ಯುವಕನ ಜೊತೆ ಹೊರಡಲು ಪೊಲೀಸರು ವ್ಯವಸ್ಥೆ ಮಾಡಬೇಕು. ಸಂತ್ರಸ್ತೆಯ ಚಿಕ್ಕಪ್ಪ ತಮ್ಮ ವಕೀಲರು ಮತ್ತು ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಬಹುದು’ ಎಂದು ಆದೇಶಿಸಿದ ನ್ಯಾಯಮೂರ್ತಿಗಳು, ಯುವಕ ಮತ್ತು ಯುವತಿಯನ್ನು ಸೆಪ್ಟೆಂಬರ್‌ 3ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.