
ಪ್ರಕಾಶ್ ರಾಜ್
ಕಲಬುರಗಿ: ‘ರಾಜಕಾರಣಿಗಳು ದೇಶವನ್ನು ಹದಗೆಡಿಸಿದ್ದಾರೆ. ಹೀಗಾಗಿ ನೀವು (ಯುವಕರು) ಮತ್ತು ನಾವು ರಾಜಕಾರಣ ಮಾಡಬೇಕಿದೆ. ರಾಜಕಾರಣಿಗಳು ನಾವು ಹೇಳಿದಂತೆ ಕೆಲಸ ಮಾಡಬೇಕಿದೆ. ದೇಶದ ಪರಿಸ್ಥಿತಿ ಭಯಾನಕವಾಗಿದ್ದು, ಮುಂದಿನ ಪೀಳಿಗೆಗೆ ಉದ್ಯೋಗಗಳು ಸಿಗುತ್ತವೆ ಎಂಬ ಖಾತರಿ ಇಲ್ಲವಾಗಿದೆ’ ಎಂದು ಚಿತ್ರನಟ ಪ್ರಕಾಶ್ ರಾಜ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಮೂರು ದಿನಗಳ ಅಂತರ ಮಹಾವಿದ್ಯಾಲಯ ಯುವಜನೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಶಾಲೆಗಳಲ್ಲಿ ಬೇರೆ ಬೇರೆ ಸಿದ್ಧಾಂತಗಳನ್ನು ತರುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಇರುವ ನಾವು ನಮ್ಮ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ನಾವೇ ಬಗೆಹರಿಸಿಕೊಳ್ಳಬೇಕೇ ಹೊರತು ಬೇರೆಯವರು ಇಲ್ಲಿ ಬರಲು ಅವಕಾಶ ನೀಡಬಾರದು. ಬಸವಣ್ಣ, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಸಂವಿಧಾನಗಳೇ ನಮಗೆ ದಾರಿ ದೀಪ. ಇದರ ಆಧಾರದ ಮೇಲೆಯೇ ನಾವು ಮುನ್ನಡೆಯಬೇಕು. ಮಧ್ಯೆ ಯಾರೇ ಬಂದರೂ ತಲೆಕೆಡಿಸಿಕೊಳ್ಳಬಾರದು’
ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.