ADVERTISEMENT

ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 15:56 IST
Last Updated 7 ಫೆಬ್ರುವರಿ 2023, 15:56 IST
   

ಬೆಂಗಳೂರು: ಎಸ್.ಎಲ್.‌ಭೋಜೇಗೌಡ ಆರೋಪಕ್ಕೆ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

‘ಭೋಜೇಗೌಡ ಅವರು ಪ್ರದರ್ಶಿಸಿರುವ ಪತ್ರವನ್ನು ವೈದ್ಯರೊಬ್ಬರಿಗೆ ಬರೆಯಲಾಗಿತ್ತು. ನಾನು ವೈದ್ಯ ಅಲ್ಲ. ಅವರು ಆರೋಪಿಸಿದಂತಹ ವ್ಯಕ್ತಿ ನನ್ನ ಕಚೇರಿಯಲ್ಲೂ ಇಲ್ಲ. ಅವರಿಗೆ ದಾಖಲೆಯ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ ಹೆಸರನ್ನು ಏಕೆ ಅಡಗಿಸಿಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಇಂತಹ ಆಧಾರರಹಿತ ಆರೋಪಗಳನ್ನು ಗಂಭೀರವಾಗಿ ಎದುರಿಸಲಾಗುವುದು. ನನ್ನ ವ್ಯಕ್ತಿತ್ವದ ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದಿರುವ ಅವರು, ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್‌ ಅವರು ಡಾ.ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.