ADVERTISEMENT

ಜಾತಿ ಸಂಘಟನೆಗಳಿಂದ ದೇಶದ ಉದ್ಧಾರವಿಲ್ಲ: ರಂಗಕರ್ಮಿ ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 10:07 IST
Last Updated 20 ಡಿಸೆಂಬರ್ 2019, 10:07 IST

ಹೊಸಪೇಟೆ: ‘ಜಾತಿ ಆಧಾರಿತ ಸಂಘಟನೆಗಳಿಂದ ಈ ದೇಶ ಉದ್ಧಾರ ಆಗುವುದಿಲ್ಲ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನೇಕಾರಿಕೆ; ವೃತ್ತಿ ಮತ್ತು ಸಂಸ್ಕೃತಿ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನೇಕಾರಿಕೆ ವೃತ್ತಿಯಲ್ಲಿರುವವರು ಸಣ್ಣ ಸಣ್ಣ ಜಾತಿಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಅವರನ್ನು ಜಾತಿ ಸಂಘಟನೆಗಳ ಹೆಸರಿನಲ್ಲಿ ಒಗ್ಗೂಡಿಸುವ ಯತ್ನ ನಡೆಸಲಾಗುತ್ತಿದೆ. ಆದರೆ, ಅದರಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ’ ಎಂದರು.

‘ನೇಕಾರಿಕೆ ಸೇರಿದಂತೆ ಎಲ್ಲಾ ವೃತ್ತಿಗಳಿಗೆ ಸಮಾನ ಗೌರವ ಸಲ್ಲುವ ಹೋರಾಟದ ಅಗತ್ಯವಿದೆ. ಅದರ ನೇತೃತ್ವ ನೇಕಾರಿಕೆ ವಹಿಸಬೇಕು. ಗಾಂಧೀಜಿಯವರು ಕೃಷಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ಮುಂಚೂಣಿಗೆ ತಂದಿದ್ದರು. ಏಕೆಂದರೆ ಅದು ದೊಡ್ಡ ಮಾರುಕಟ್ಟೆಯಿರುವ ವೃತ್ತಿ. ಅದರಷ್ಟು ಅಸಾಧಾರಣವಾಗಿ ಬೇರೆ ಯಾವುದೂ ಬೆಳೆದಿಲ್ಲ’ ಎಂದು ತಿಳಿಸಿದರು.

ADVERTISEMENT

‘ನೇಕಾರಿಕೆ ಬಹುದೊಡ್ಡ ಗ್ರಾಮೀಣ ಕೈಗಾರಿಕೆ. ಬಾದಾಮಿಯನ್ನು ಕೇಂದ್ರವಾಗಿಟ್ಟುಕೊಂಡು ಸಗಟು ವ್ಯಾಪಾರ ಕೇಂದ್ರವನ್ನು ಸರ್ಕಾರ ಸ್ಥಾಪಿಸಬೇಕು. ಅಗತ್ಯ ಸೌಲಭ್ಯ ಕಲ್ಪಿಸಿ, ಅಲ್ಲಿ ಮಾರಾಟವಾಗುವ ಶುದ್ಧ ಕೈಮಗ್ಗದ ಬಟ್ಟೆಗಳಿಗೆ ಸರ್ಕಾರ ರಿಯಾಯಿತಿ ಕೊಡಬೇಕು. ಹೀಗೆ ಮಾಡಿದರೆ ನೇಕಾರರು ಹಾಗೂ ನೇಕಾರಿಕೆಯನ್ನು ಉಳಿಸಿದಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.