ADVERTISEMENT

ವಿಧಾನ ಪರಿಷತ್ತಿಗೆ ಕಾಗದರಹಿತ ಸ್ಪರ್ಶ; ನೂತನ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆಶಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
ಕೆ.ಪ್ರತಾಪಚಂದ್ರ ಶೆಟ್ಟಿ
ಕೆ.ಪ್ರತಾಪಚಂದ್ರ ಶೆಟ್ಟಿ   

ಬೆಳಗಾವಿ:‘ವಿಧಾನ ಪರಿಷತ್ತಿನ ಕಲಾಪಗಳನ್ನು ನಡೆಸುವುದಕ್ಕೆ ಕಾಗದರಹಿತ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅದನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತೇನೆ’

ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಕನಸು ಇದು. ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

*ನೀವು ಸಭಾಪತಿ ಆಗುವ ಬಯಕೆ ಹೊಂದಿದ್ದಿರಾ?

ADVERTISEMENT

ನಾನು ನಾಲ್ಕು ಬಾರಿ ವಿಧಾನಸಭೆ, ಮೂರು ಬಾರಿ ವಿಧಾನ ಪರಿಷತ್‌ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಇದುವರೆಗೆ ಪಕ್ಷವು ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಈಗ ಜವಾಬ್ದಾರಿ ಕೊಟ್ಟಿದೆ. ಅದನ್ನು ಬಯಸದೇ ಬಂದ ಭಾಗ್ಯ ಎನ್ನಲಾಗದು. ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.

* ರಾಜಕೀಯದಿಂದಲೇ ದೂರವಾಗುವ ಮಾತನಾಡಿದವರು ನೀವು. ಮತ್ತೆ ಈ ಹುದ್ದೆವರೆಗೆ ಹೇಗೆ ಬಂದಿರಿ?

ವಿಧಾನಸಭೆ ಚುನಾವಣೆಯಲ್ಲಿ ಐದನೇ ಬಾರಿ ಸ್ಪರ್ಧಿಸಿದಾಗ ಸೋತೆ. ಆರ್ಥಿಕ ಬಲ ಇಲ್ಲದ ಕಾರಣಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದೆ. ಪಕ್ಷವು ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತು. ಈ ಚುನಾವಣೆ
ಗಳಲ್ಲಿ ಎರಡು ಬಾರಿ ಗೆದ್ದ ಬಳಿಕ ಇನ್ನು ಸಾಕೆನಿಸಿತು. ನಾನು ಸ್ಪರ್ಧಿಸದಿರಲು ನಿರ್ಧರಿಸಿದ್ದೆ. 25 ವರ್ಷ ನಿಮ್ಮ ಮಾತು ನಾವು ಕೇಳಿದ್ದೇವೆ, ಈಗ ನಮ್ಮ ಮಾತನ್ನು ನೀವು ಕೇಳಿ ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡಿದ್ದರಿಂದ ಮತ್ತೆ ಸ್ಪರ್ಧಿಸಿದೆ.

* ಸಚಿವರಾಗಲು ನಿಮಗೂ ಅವಕಾಶ ಇತ್ತಲ್ಲವೇ?

ನಾನು ವಿಧಾನ ಪರಿಷತ್ತಿಗೆ ಆಯ್ಕೆ ಆಗಲು ಶ್ರಮಿಸಿದ ಶಾಸಕರಿಗೇ ಸ್ಪರ್ಧೆ ಒಡ್ಡುವುದು ಸರಿ ಅಲ್ಲ ಎಂಬುದು ನನ್ನ ಭಾವನೆ. ಹಾಗಾಗಿ ಸಚಿವ ಸ್ಥಾನ ಕೇಳಲಿಲ್ಲ.

*ಪರಿಷತ್ತಿನ ಕಲಾಪಗಳಲ್ಲಿ ನಿಯಮ ಮೀರಿ ಚರ್ಚೆ ಸಾಗುವುದು ವಾಡಿಕೆ ಆಗಿಬಿಟ್ಟಿದೆ. ಇದನ್ನು ಹೇಗೆ ಸರಿದಾರಿಗೆ ತರುತ್ತೀರಿ?

ಅನೇಕ ಬಾರಿ ನನಗೂ ಅನ್ನಿಸಿದೆ, ಇದು ಸರಿ ಅಲ್ಲ ಎಂದು. ನಿಯಮಾವಳಿಗಳ ಪ್ರಕಾರ ಕಲಾಪ ನಡೆಸುವ ಆಶಯ ನನ್ನದು. ಅಷ್ಟು ಮಾಡಿದರೆಶಿಸ್ತು ತಾನಾಗೇ ಬರುತ್ತದೆ. ಕಲಾಪಗಳಲ್ಲಿ ಬದಲಾವಣೆಗಳನ್ನು ಮಾಡುವುದಿಲ್ಲ, ಇದು ಹಿಂದಿನ ರೀತಿಯೇ ನಡೆದುಕೊಂಡು ಹೋಗಲಿದೆ.

* ಕೆಲವು ಸದಸ್ಯರು ಕಲಾಪಗಳಿಗೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ದೂರಿದೆಯಲ್ಲ?

ಜನ ಶಾಸಕರನ್ನು ಆರಿಸಿ ಕಳುಹಿಸುವುದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ. ಹಾಗಾಗಿ ಕಲಾಪಗಳಲ್ಲಿ ಭಾಗವಹಿಸುವುದು ಎಲ್ಲ ಶಾಸಕರ ಜವಾಬ್ದಾರಿ. ಅದನ್ನು ಶಾಸಕರು ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ. ಉದ್ದೇಶಪೂರ್ವಕವಾಗಿ ಯಾರೂ ಸದನಕ್ಕೆಗೈರು ಹಾಜರಾಗುವುದಿಲ್ಲ.

*ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವ ಬಗ್ಗೆ ನಿಲುವೇನು?

ಬರ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಆದ್ಯತೆ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.