ADVERTISEMENT

ಮುಂಗಾರು ಪೂರ್ವ ಮಳೆ: ಕೃಷಿಗೆ ಸಜ್ಜಾದ ಇಳೆ

77 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಸಿದ್ಧತೆ l 1.03 ಕೋಟಿ ಟನ್ ಉತ್ಪಾದನೆ ಗುರಿ

ಎಸ್.ರವಿಪ್ರಕಾಶ್
Published 25 ಮೇ 2021, 20:02 IST
Last Updated 25 ಮೇ 2021, 20:02 IST
ಹುಬ್ಬಳ್ಳಿ ಹೊರವಲಯದ ಹೆಬ್ಬಳ್ಳಿ ರಸ್ತೆ ಸಮೀಪದ ಹೊಲವೊಂದರಲ್ಲಿ ಮಂಗಳವಾರ ಉಳುಮೆಯಲ್ಲಿ ತೊಡಗಿದ್ದ ರೈತ ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಹೊರವಲಯದ ಹೆಬ್ಬಳ್ಳಿ ರಸ್ತೆ ಸಮೀಪದ ಹೊಲವೊಂದರಲ್ಲಿ ಮಂಗಳವಾರ ಉಳುಮೆಯಲ್ಲಿ ತೊಡಗಿದ್ದ ರೈತ ಪ್ರಜಾವಾಣಿ ಚಿತ್ರ   

ಬೆಂಗಳೂರು: ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಧಿಕವಾಗಿದ್ದು, ಜೂನ್ ಮೊದಲ ವಾರ ಕಾಲಿಡುವ ಮುಂಗಾರಿನಲ್ಲೂ ಉತ್ತಮ ಮಳೆ ಆಗುವ ಲಕ್ಷಣಗಳಿವೆ. ಇದರಿಂದಾಗಿ ಕೋವಿಡ್ ಮಧ್ಯೆಯೂ ರಾಜ್ಯದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.

ಈ ವರ್ಷ ಸುಮಾರು 1.03 ಕೋಟಿ ಟನ್‌ ಆಹಾರಧಾನ್ಯಗಳ ಉತ್ಪಾದನೆಗೆ ಗುರಿ ಇದ್ದು, ಕೋವಿಡ್‌ ಮಾರ್ಗಸೂಚಿಗ
ಳನ್ನು ಪಾಲಿಸಿ, ಕೃಷಿ ಚಟುವಟಿಕೆ ನಡೆಸಲು ರೈತರಿಗೆ ಉತ್ತೇಜನ ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. 77 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನಿದೆ. ರಸಗೊಬ್ಬರವೂ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಟ್ಟುಕೊಳ್ಳಲಾಗಿದೆ.

ಹಿಂದಿನ ವರ್ಷದಂತೆ ಈ ವರ್ಷವೂ ‘ಲಾ ನಿನಾ’ ಹವಾಮಾನ ಪರಿಣಾಮ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರ ಪರಿಣಾಮ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ.

ADVERTISEMENT

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ, ಮುಂಗಾರು ಪೂರ್ವ ಅವಧಿಯಲ್ಲಿ 10 ಜಿಲ್ಲೆಗಳಲ್ಲಿ ಅತ್ಯಧಿಕ, 13 ಜಿಲ್ಲೆಗಳಲ್ಲಿ ಅಧಿಕ, 4 ಜಿಲ್ಲೆಗಳಲ್ಲಿ ಸಾಮಾನ್ಯ ಮತ್ತು 3 ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ, ಮಾರ್ಚ್‌ನಲ್ಲಿ 4 ಮಿ.ಮೀ, ಏಪ್ರಿಲ್‌ನಲ್ಲಿ 49 ಮಿ.ಮೀ ಮತ್ತು ಮೇ ತಿಂಗಳಿನಲ್ಲಿ ಈವರೆಗೆ 82 ಮಿ.ಮೀ ಮಳೆಯಾಗಿದೆ. ಒಟ್ಟು 134 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 63 ರಷ್ಟು ಹೆಚ್ಚಾಗಿದೆ.

77 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ: ರಾಜ್ಯದಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವುದರಿಂದ 77 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಚಾಮರಾಜನಗರ, ಮೈಸೂರು, ಮಂಡ್ಯ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 1.44 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಇಲ್ಲ. ದಾಸ್ತಾನು ಇದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು.

ರೈತರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆ ಆದರೂ ಅವರ ನೆರವಿಗಾಗಿ ‘ಅಗ್ರಿವಾರ್‌ ರೂಂ’ ಇದೆ. ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತದೆ. ಈ ಸಂದರ್ಭದಲ್ಲಿ ಅವರು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದೂ ಶ್ರೀನಿವಾಸ್‌ತಿಳಿಸಿದರು.

ಜೂನ್‌ನಲ್ಲಿ ಉತ್ತಮ ಮಳೆ
‘ಈ ಮುಂಗಾರಿನಲ್ಲಿ ಜೂನ್‌ ತಿಂಗಳಿನಲ್ಲಿ ಉತ್ತಮ ಮಳೆಯಾಗಲಿದ್ದು, ಜುಲೈ ಮತ್ತು ಆಗಸ್ಟ್‌ನಲ್ಲಿ ಕಡಿಮೆ ಆಗಲಿದೆ. ಮತ್ತೆ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯೊಂದು ಹೇಳಿದೆ. ಈ ರೀತಿ ಆದರೆ ಕಷ್ಟ. ಈ ವಾರದ ಕೊನೆಯಲ್ಲಿ ಮತ್ತೊಂದು ವರದಿ ಬರಲಿದ್ದು, ಅದರಲ್ಲಿ ಮುಂಗಾರಿನ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.