ಬೆಂಗಳೂರು: ಮುಂದಿನ ಫೆಬ್ರುವರಿ 11 ರಿಂದ 14 ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕ ಹೂಡಿಕೆಗೆ ಅತ್ಯುತ್ತಮ ತಾಣವೆನ್ನುವುದನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ‘ಇನ್ವೆಸ್ಟ್ ಕರ್ನಾಟಕ– 2025’ ರ ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶದ ಸಮನ್ವಯ ಸಭೆಯಲ್ಲಿ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು, ಕೈಗಾರಿಕಾ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶವು ಬಂಡವಾಳ ಹೂಡಿಕೆ, ಕೈಗಾರಿಕಾ ಮತ್ತು ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಹೀಗೆ ಹಲವು ದೃಷ್ಟಿಗಳಿಂದ ಮಹತ್ವದ್ದಾಗಿದೆ. ಈ ಸಮಾವೇಶದಲ್ಲಿ ದೇಶ– ವಿದೇಶಗಳ 5 ಸಾವಿರ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣಿತರು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತಿದ್ದು, ಮಹಿಳಾ ಉದ್ಯಮಿಗಳಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುತ್ತಿದೆ ಎಂದರು.
ಫೆಬ್ರುವರಿ 11 ರ ಸಂಜೆಯೇ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ. ಫೆ.12 ಮತ್ತು 13 ರಂದು ಸಂಪೂರ್ಣವಾಗಿ ಎರಡು ದಿನ ಗಂಭೀರ ಚರ್ಚೆಗಳು ನಡೆಯಲಿವೆ. ಫೆ. 14 ರಂದು ಸಮಾವೇಶದ ಸಮಾರೋಪ ನಿಗದಿಯಾಗಿದೆ. ಸಮಾವೇಶವನ್ನು ಯಶಸ್ವಿಗೊಳಿಸಲೆಂದು ಈಗಾಗಲೇ ಅಮೆರಿಕ ಮತ್ತು ಜಪಾನಿನಲ್ಲಿ ರೋಡ್ ಶೋ ನಡೆಸಲಾಗಿದೆ. ಸದ್ಯದಲ್ಲೇ ಯೂರೋಪ್‌ನಲ್ಲೂ ರೋಡ್ ಶೋ ನಡೆಯಲಿದೆ. ಗಣ್ಯ ಸಾಧಕರೊಬ್ಬರನ್ನು ಸಮಾವೇಶದ ಉದ್ಘಾಟಕರನ್ನಾಗಿ ಆಹ್ವಾನಿಸಲಾಗುವುದು ಎಂದು ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.