ADVERTISEMENT

‘ಗರ್ಭಿಣಿ ಕಂಡಕ್ಟರ್‌ಗಳನ್ನು ಎರವಲು ಸೇವೆಗೆ ನಿಯೋಜಿಸಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:15 IST
Last Updated 9 ಏಪ್ರಿಲ್ 2019, 16:15 IST

ಬೆಂಗಳೂರು: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಕೆಲಸ ನಿರ್ವಹಿಸುತ್ತಿರುವ ಗರ್ಭಿಣಿ ಕಂಡಕ್ಟರ್‌ಗಳ ಆರೋಗ್ಯದ ದೃಷ್ಟಿಯಿಂದ ಅವರನ್ನು ಎರವಲು ಸೇವೆಗೆ ನಿಯೋಜಿಸಿ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಬಿಎಂಟಿಸಿ ಆಡಳಿತ ವ್ಯವಸ್ಥಾಪಕರಿಗೆ (ಎಂ.ಡಿ) ನಿರ್ದೇಶಿಸಿದೆ.

ಈ ಕುರಿತಂತೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ ಕುಮಾರ್‌ ಅವರು ಮಂಗಳವಾರ ಪತ್ರ ಬರೆದಿದ್ದು, ‘ತಕ್ಷಣವೇ ಈ ಕುರಿತಂತೆ ಗಮನ ಹರಿಸಬೇಕು. ಇಲ್ಲವಾದರೆ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಸೂಕ್ತ ನಿರ್ದೇಶನಕ್ಕೆ ಕೋರಬೇಕಾಗುತ್ತದೆ’ ಎಂದು ಎಂ.ಡಿ ಅವರನ್ನು ಎಚ್ಚರಿಸಿದ್ದಾರೆ.

‘ಗರ್ಭಿಣಿ ಕಂಡಕ್ಟರ್‌ಗಳು ಗರ್ಭವತಿಯರಾದ ನಂತರ ಇಲಾಖೆಯ ಮುಖಸ್ಥರಿಗೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು. ಇದನ್ನು ಪರಿಗಣಿಸಿ ಅಂತಹವರನ್ನು ಗರ್ಭಾವಸ್ಥೆ ದಿನದಿಂದ ಕಚೇರಿ ಕೆಲಸಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಧಿಕಾರ ಸೂಚಿಸಿದೆ.

ADVERTISEMENT

‘ಗರ್ಭಿಣಿ ಕಂಡಕ್ಟರ್‌ಗಳು ಎಂಟರಿಂದ ಹತ್ತು ತಾಸುಗಳ ಕಾಲ ಬಸ್‌ಗಳಲ್ಲೇ ಸಂಚರಿಸಬೇಕಾಗುತ್ತದೆ. ಇದರಿಂದ ಹೊಟ್ಟೆಯೊಳಗಿನ ಮಗು ಹಾಗೂ ತಾಯಿಯ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಮತ್ತು ಇವರ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ದೂರ ಮಾಡಲು ಈ ದಿಕ್ಕಿನಲ್ಲಿ ಸುತ್ತೋಲೆ ಹೊರಡಿಸಬೇಕು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.