ADVERTISEMENT

ಆರ್‌ಸಿಯು ಪರೀಕ್ಷೆ: ಶೀಘ್ರವೇ ವೇಳಾಪಟ್ಟಿ

ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ಒಳಗೆ ನಡೆಸಲು ಕ್ರಮ

ಎಂ.ಮಹೇಶ
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST
‍ಪ್ರೊ.ಎಂ. ರಾಮಚಂದ್ರಗೌಡ
‍ಪ್ರೊ.ಎಂ. ರಾಮಚಂದ್ರಗೌಡ   

ಬೆಳಗಾವಿ: ಯುಜಿಸಿ ಮಾರ್ಗಸೂಚಿ ಪ್ರಕಾರ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ಒಳಗೆ ಪರೀಕ್ಷೆ ಪೂರ್ಣಗೊಳಿಸಲು ಬೇಕಾದ ಸಿದ್ಧತೆಗಳನ್ನು ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸಲು ಶೀಘ್ರವೇ ವೇಳಾಪಟ್ಟಿ ‍ಪ್ರಕಟಿಸಲು ಉದ್ದೇಶಿಸಿದೆ.

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಆರ್‌ಸಿಯುನಲ್ಲಿ 45ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕಾಗಿದೆ.

ಏಪ್ರಿಲ್‌ನಲ್ಲೇ ಪರೀಕ್ಷೆಗಳು ನಡೆಯಬೇಕಾಗಿತ್ತು. ಆದರೆ, ಕೋವಿಡ್–19 ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು. ಈಗಾಗಲೇ ತಡ ಆಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯ ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ADVERTISEMENT

ಸರ್ಕಾರದ ಸೂಚನೆಯಂತೆ

ರಾಜ್ಯ ಸರ್ಕಾರದ ಸೂಚನೆ ಮೇರೆಗೆ, ಪದವಿಯ ಮೊದಲ 2 ವರ್ಷಗಳ ಮತ್ತು ಸ್ನಾತಕೋತ್ತರ ಪದವಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ‍ಪರೀಕ್ಷೆ ಇರುವುದಿಲ್ಲ. ಅವರನ್ನು ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲಾಗುವುದು. ಆದರೆ, ಪದವಿಯ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಿಂದ ಕಾಲೇಜುಗಳಿಗೆ ಅಧಿಕೃತ ಸೂಚನೆ ನೀಡಲಾಗಿದೆ.

‘ಸೆಪ್ಟೆಂಬರ್‌ 30ರ ಒಳಗೆ ಪರೀಕ್ಷೆ ನಡೆಸಬೇಕು ಎಂದು ಯುಜಿಸಿ ಆದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕರಡು ವೇಳಾಪಟ್ಟಿ ಸಿದ್ಧಪಡಿಸಿ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ. ಅಲ್ಲಿಂದ ನಿರ್ದೇಶನ ಬಂದ ನಂತರ ಅಧಿಕೃತ ವೇಳಾಪಟ್ಟಿ ಹೊರಬೀಳಲಿದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಬರೆಯಲು ಬೇಕಾದ ಬುಕ್‌ಲೆಟ್‌ಗಳನ್ನು ಫೆಬ್ರುವರಿ–ಮಾರ್ಚ್‌ನಲ್ಲೇ ಸಿದ್ಧಪಡಿಸಿ ಇಟ್ಟುಕೊಂಡಿದ್ದೇವೆ’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯದಿಂದ ತಜ್ಞ ಪ್ರಾಧ್ಯಾಪಕರ ಮೂಲಕ ಎಲ್ಲ ವಿಷಯಗಳ ನೋಟ್ಸ್‌ ಸಿದ್ಧಪಡಿಸಿ, ಅವುಗಳನ್ನು ವಿದ್ಯಾರ್ಥಿಗಳ ಇ–ಮೇಲ್‌ ಐಡಿಗಳಿಗೆ ಕಳುಹಿಸಲಾಗಿದೆ. ಅವುಗಳನ್ನು ವಿದ್ಯಾರ್ಥಿಗಳು ಓದಿಕೊಳ್ಳುವುದರಿಂದ ಬಹಳ ಅನುಕೂಲವಾಗಲಿದೆ. ಅವುಗಳನ್ನು ಕಾಲೇಜುಗಳಿಗೂ ತಲುಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಬೇಕು, ವಿದ್ಯಾರ್ಥಿಗಳಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಒದಗಿಸಬೇಕು ಎಂದು ಕಾಲೇಜುಗಳಿಗೆ ಸೂಚಿಸಲಾಗಿದೆ’ ಎಂದರು.

ಬ್ಯಾಕ್‌ಲಾಗ್ ವಿಷಯಕ್ಕೆ ಪರೀಕ್ಷೆ

‘ಬಿಎ, ಬಿಎಸ್ಸಿ, ಬಿಕಾಂ, ಬಿ.ಇಡಿ., ಎಂಎ, ಎಂಎಸ್ಸಿ, ಎಂಕಾಂ, ಎಂಬಿಎ, ಎಂಇಡಿ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಅವರು 4ನೇ ಹಾಗೂ 2ನೇ ಸೆಮಿಸ್ಟರ್‌ನ ಪರೀಕ್ಷೆಗೆ ಗೈರು ಹಾಜರಿ ಅಥವಾ ಯಾವುದಾದರೂ ಕಾರಣದಿಂದ ಬ್ಯಾಕ್‌ಲಾಗ್‌ ಉಳಿಸಿಕೊಂಡಿದ್ದರೆ ಆ ವಿಷಯದ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕು ಎಂದು ಯುಜಿಸಿ ನಿರ್ದೇಶನ ನೀಡಿದೆ. ಭವಿಷ್ಯದಲ್ಲಿ ಅವರಿಗೆ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೊಂದರೆ ಆಗದಿರಲೆಂದು ಈ ಸೂಚನೆ ನೀಡಿದೆ’ ಎಂದು ಸ್ಪಷ್ಟಪಡಿಸಿದರು.

‘ಲಾಕ್‌ಡೌನ್‌ಗಿಂತ ಮುಂಚೆ ಶೇ 90ರಷ್ಟು ಪಠ್ಯಕ್ರಮ ಪೂರ್ಣಗೊಳಿಸಲಾಗಿತ್ತು. ಉಳಿದದ್ದನ್ನು ಆನ್‌ಲೈನ್‌ನಲ್ಲಿ ನಡೆಸಿದ್ದೇವೆ. ಎಂಬಿಎ ವಿದ್ಯಾರ್ಥಿಗಳಿಗೆ ಹೆಚ್ಚು ಆನ್‌ಲೈನ್‌ ತರಗತಿಗಳು ನಡೆದಿವೆ. ತಾಂತ್ರಿಕ ಕಾರಣದಿಂದ ಕೆಲವರು ಪಾಠದಿಂದ ದೂರ ಉಳಿದಿರುವ ಸಾಧ್ಯತೆ ಇದೆ. ಹೀಗಾಗಿ, ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸಲಾಗುವುದು. ಆ.1ರಿಂದ ಆ.10ರವರೆಗೆ ವಿದ್ಯಾರ್ಥಿಗಳು ವರದಿ ಮಾಡಿಕೊಳ್ಳಲು ಸಮಯ ಕೊಡಲಾಗುವುದು. ಆ. 11ರಿಂದ ತರಗತಿಗಳು ಆರಂಭಗೊಳ್ಳಲಿವೆ. ಕಡ್ಡಾಯವಾಗಿ ಹಾಜರಾಗಬೇಕು ಎಂದೇನಿಲ್ಲ. ಆಸಕ್ತಿ ಇದ್ದರೆ ಹಾಜರಾಗಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.