ADVERTISEMENT

ದಸರಾ ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ: ಕರ್ನಾಟಕ ಮಾದರಿ ರಾಜ್ಯ

ಭಕ್ತಿ, ಸಮಾನತೆ, ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಮಾದರಿ ರಾಜ್ಯ

ಕೆ.ನರಸಿಂಹ ಮೂರ್ತಿ
Published 26 ಸೆಪ್ಟೆಂಬರ್ 2022, 15:36 IST
Last Updated 26 ಸೆಪ್ಟೆಂಬರ್ 2022, 15:36 IST
ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2022 ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡಿದರು. ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2022 ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡಿದರು. ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ.   

ಮೈಸೂರು:ನಗರದ ಚಾಮುಂಡಿಬೆಟ್ಟದ ಆವರಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಬಾರಿ ಅದ್ಧೂರಿ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿ ದಾಖಲೆ ಬರೆದರು.

ರಾಷ್ಟ್ರಪತಿಯಾದ ಬಳಿಕ ಅವರು ರಾಜ್ಯಕ್ಕೆ ನೀಡಿದ ಮೊದಲ ಭೇಟಿಯು ದಸರಾ ಉದ್ಘಾಟನೆ ಮೂಲಕ ವಿಶೇಷವಾಗಿ ದಾಖಲಾಯಿತು.
ಇದುವರೆಗೆ ರಾಜ್ಯಪಾಲರು, ಉಸ್ತುವಾರಿ ಸಚಿವರು, ರೈತರು, ಲೇಖಕರು, ನಟ-ನಟಿಯರು, ರಾಜಕಾರಣಿಗಳು, ವೈದ್ಯರ ಉದ್ಘಾಟನೆಯಿಂದ ಗಮನ ಸೆಳೆದಿದ್ದ ಉತ್ಸವವು ಇದೇ ಮೊದಲು ದೇಶದ ಪ್ರಥಮ ಪ್ರಜೆಯ ಆಗಮನದಿಂದ ವಿಶೇಷವಾಗಿ ಕಳೆಗಟ್ಟಿತ್ತು.
ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳಿತ ನಾಡದೇವಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿ‌ ಅವರು ಉತ್ಸವ ಕ್ಕೆ ವಿಧ್ತುಕ್ತ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 'ಭಕ್ತಿ, ಸಮಾನತೆ, ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಆದರ್ಶ ರಾಜ್ಯವಾಗಿದೆ' ಎಂದು ಬಣ್ಣಿಸಿದರು.
'ಇವುಗಳ ಜೊತೆಗೆ, ಮಕ್ಕಳ ಶಾಲಾ ದಾಖಲಾತಿಯಲ್ಲೂ ಸರ್ಕಾರವು ನೂರಕ್ಕೆ ನೂರರಷ್ಟು ಸಾಧನೆ ಮಾಡಿರುವುದು
ಶ್ಲಾಘನೀಯ' ಎಂದರು.

ADVERTISEMENT

'12 ನೇ ಶತಮಾನದಲ್ಲಿ‌ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಅಧ್ಯಾತ್ಮಿಕ, ಸಾಮಾಜಿಕ ಪ್ರಗತಿಗಾಗಿ ದುಡಿದರು. ಬಸವಣ್ಣ ಸಮಾನತೆಯ ಸಮಾಜಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಅಧ್ಯಾತ್ಮ ಸಾಧನೆಗಾಗಿ ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದರು' ಎಂದು ಸ್ಮರಿಸಿದರು.

'ರಾಜ್ಯದಲ್ಲಿ ರಾಣಿ‌ ಅಬ್ಬಕ್ಕ,‌ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮಹಿಳಾ ಮಾದರಿಗಳಾಗಿದ್ದಾರೆ. ಮಹಿಷಾಸುರನನ್ನು ದೇವಿ ಚಾಮುಂಡಿ ಕೊಂದ ನಂತರ ಅಧ್ಯಾತ್ಮಿಕ ಮಹತ್ವವನ್ನು ಪಡೆದಿರುವ‌ ಕ್ಷೇತ್ರದಲ್ಲಿ ದಸರಾ ಉತ್ಸವವನ್ನು ಉದ್ಘಾಟಿಸಿಪರಂಪರೆಯೊಂದಿಗೆ ಮುನ್ನಡೆಯಲು ಅಪರೂಪದ ಅವಕಾಶ ದೊರಕಿದ್ದು ಸಂತಸ ತಂದಿದೆ' ಎಂದರು. ಆರಂಭದಲ್ಲಿ, 'ದೇವಿ ಚಾಮುಂಡೇಶ್ವರಿಗೆ, ನೆರೆದ ಎಲ್ಲ‌ ಸಹೃದಯರಿಗೆ ಹೃದಯ ಪೂರ್ವಕ ನಮಸ್ಕಾರಗಳು' ಎಂದು ಕನ್ನಡದಲ್ಲೇ ಅವರು ಮಾತು ಶುರು ಮಾಡಿದ್ದಕ್ಕೆ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಲವು‌ ವಿಶೇಷಗಳ ದಸರಾ; ಸಿಎಂ
'ಈ ಬಾರಿಯ ದಸರಾ ಹಲವು ವಿಶೇಷಗಳಿಂದ ಕೂಡಿದೆ. ಗತವೈಭವವನ್ನು ನೆನಪು ಮಾಡಿಕೊಳ್ಳುವಂತೆ ಅದ್ಧೂರಿಯಾಗಿ ನಡೆಯಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

'ರಾಜ್ಯದ ಮನೆಮನೆಗಳಲ್ಲಿ ದಸರಾ ಆಚರಣೆ ನಡೆದಿದೆ. ಚಾಮುಂಡೇಶ್ವರಿಯು ನಾಡನ್ನು ಸುಭಿಕ್ಷವಾಗಿಡಲಿ ಎಂದು ಎಲ್ಲರೂ ಪ್ರಾರ್ಥಿಸಬೇಕು' ಎಂದರು.

'ರಾಜಪ್ರಭುತ್ವ‌ ಅಳಿದು ಪ್ರಜಾಪ್ರಭುತ್ವ ಬಂದ ಬಳಿಕವೂ ಸಂಪ್ರದಾಯದಂತೆ ಉತ್ಸವವನ್ನು ಆಚರಿಸಲಾಗುತ್ತಿದೆ. ಇಂದು ಮಹಿಷಾಸುರರು ಇಲ್ಲ. ಆದರೆ ನಮ್ಮೊಳಗಿನ ಮಹಿಷಾಸುರರನ್ನು, ಅಂಥ ಗುಣಗಳನ್ನು ದಮನ ಮಾಡಬೇಕು. ಹಾಗೆಂದು ನವರಾತ್ರಿ ಉತ್ಸವದಲ್ಲಿ ಸಂಕಲ್ಪ ಮಾಡಬೇಕು' ಎಂದರು.

ಉದ್ಘಾಟನೆ ಬಳಿಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಷ್ಟ್ರಪತಿಗೆ ಮೈಸೂರು ಪೇಟ ತೊಡಿಸಿ, ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿಯುಳ್ಳ ಮಂಟಪವನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಬಳಿಕ, ರಾಷ್ಟ್ರಪತಿಯವರು ಹುಣಸೂರು, ‍‍ಪಿರಿಯಾ‍ಪಟ್ಟಣ ಹಾಗೂ ಎಚ್‌.ಡಿ. ಕೋಟೆ ತಾಲ್ಲೂಕಿನ ಆದಿವಾಸಿಗಳೊಂದಿಗೆ ಫೋಟೊಸೆಷನ್‌ ನಲ್ಲೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 200 ಆದಿವಾಸಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಉತ್ಸವ ಉದ್ಘಾಟನೆಗೂ ಮುನ್ನ ರಾಷ್ಟ್ರಪತಿ ದೇವಸ್ಥಾನಕ್ಕೆ ತೆರಳಿ ಚಾಮುಂಡಿದೇವಿಯ ದರ್ಶನ ಪಡೆದರು. ಕೇಂದ್ರ‌ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ‌ ಸಚಿವ ಎಸ್.ಟಿ.ಸೋಮಶೇಖರ್,ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವ ‌ಸುನೀಲ್ ಕುಮಾರ್ ವೇದಿಕೆಯಲ್ಲಿದ್ದರು.

ವೇದಿಕೆಯಲ್ಲಿ ದೊರಕದ ಅವಕಾಶ
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಬೇಕಿತ್ತಾದರೂ‌ ಅವರಿಗೆ ವೇದಿಕೆಯಲ್ಲಿ‌ ಅವಕಾಶವಿರಲಿಲ್ಲ. ನಗರದ ಪ್ರಥಮ ಪ್ರಜೆ ಮೇಯರ್ ಶಿವಕುಮಾರ್‌ ಅವರಿಗೂ ವೇದಿಕೆ ಏರಲು ಅವಕಾಶ ಸಿಗಲಿಲ್ಲ. ರಾಷ್ಟ್ರಪತಿ ಕಚೇರಿಯ ಸೂಚನೆಯಂತೆ ವೇದಿಕೆಯಲ್ಲಿ 13 ಗಣ್ಯರು ಇರಲಿದ್ದಾರೆ ಎಂದು ಉಸ್ತುವಾರಿ‌ ಸಚಿವರು ತಿಳಿಸಿದ್ದರು. ಆದರೆ ಉದ್ಘಾಟನೆಗೂ ಮುನ್ನ ವೇದಿಕೆಯಲ್ಲಿ ಎಂಟು ಕುರ್ಚಿಗಳನ್ನು ಹಾಕಲಾಗಿತ್ತು. ಕಾರ್ಯಕ್ರಮ ಶುರುವಾಗುವಷ್ಟರಲ್ಲಿ ಆರು ಕುರ್ಚಿಗಳಷ್ಟೇ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.