ADVERTISEMENT

ರಾಷ್ಟ್ರಪತಿ ಕುರಿತು ಏಕವಚನ ಬಳಕೆ | ಸಿದ್ದರಾಮಯ್ಯ ಘನತೆ ಕಾಪಾಡಿಕೊಳ್ಳಲಿ: ಜೋಶಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 8:04 IST
Last Updated 24 ಅಕ್ಟೋಬರ್ 2025, 8:04 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: 'ರಾಷ್ಟ್ರಪತಿ, ಪ್ರಧಾನಮಂತ್ರಿ ಅವರ ಕುರಿತು ಏಕವಚನದಲ್ಲಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಜೀವನದ ಘನತೆ ಕಾಪಾಡಿಕೊಳ್ಳಬೇಕಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೋನಿಯಾಗಾಂಧಿ‌ ಕುರಿತು ಸಿದ್ದರಾಮಯ್ಯ ಏಕವಚನದಲ್ಲಿ‌ ಮಾತನಾಡಲಿ ನೋಡೋಣ. ಆನಂತರ, ಅವರು ಮುಖ್ಯಮಂತ್ರಿ ಸ್ಥಾನದಲ್ಲೇ ಇರುವುದಿಲ್ಲ' ಎಂದರು.

'ಸಂಸದ‌ ತೇಜಸ್ವಿ ಸೂರ್ಯ ಅವರ ಬಗ್ಗೆಯೂ ಸಿದ್ದರಾಮಯ್ಯ ಕೀಳಾಗಿ ಮಾತನಾಡಿದ್ದಾರೆ. ಅದಕ್ಕಿಂತ ಕೆಟ್ಟದಾಗಿ ಟೀಕೆ ಮಾಡಲು ನಮಗೂ ಬರುತ್ತೆ. ಆದರೆ, ಅಂತಹ ಸಂಸ್ಕೃತಿ ನಮ್ಮದಲ್ಲ. ಕೈಲಾಗದವರು ಮೈ ಪರಚಿಕೊಂಡಂತೆ, ಕುಣಿಯಲಾಗದವರು ನೆಲ ಡೊಂಕು ಎನ್ನುವ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದು' ಎಂದು ಹೇಳಿದರು.

ADVERTISEMENT

'ದೇಶದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿದ್ದರೂ, ರಾಜ್ಯಕ್ಕೆ ಸಮರ್ಪಕವಾಗಿ ತೆರಿಗೆ‌ ಪಾಲು ನೀಡಿದರೂ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿ ಅವರಿಗೆ ಉದ್ಯೋಗವಿಲ್ಲ. ರಾಜಕೀಯವಾಗಿ ನಿರುದ್ಯೋಗಿಗಳು ಅವರು' ಎಂದು ಟೀಕಿಸಿದರು.

'ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ‌ ಇಲ್ಲ ಎಂಬುದಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೇ ಸಾಕ್ಷಿ.‌ ಡಿ.ಕೆ.‌ಶಿವಕುಮಾರ್ ಮುಖ್ಯಮಂತ್ರಿ ಆಗಬಾರದೆಂದು ಸಿದ್ದರಾಮಯ್ಯ ಅವರೇ ಈ ಹೇಳಿಕೆ ಕೊಡಿಸಿದ್ದಾರೆ. ಈ ಮೂಲಕ ಪಕ್ಷದ ಹೈಕಮಾಂಡ್ ಅವರು ಸವಾಲು ಹಾಕುತ್ತಿದ್ದಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.