ಬೆಂಗಳೂರು: ‘ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಇದುವರೆಗೆ ಈಡೇರಿಸಿಲ್ಲ. ನಿಗದಿತ ಗಡುವಿನಲ್ಲಿ ಬೇಡಿಕೆ ಈಡೇರಿಸದಿದ್ದರೆ, ರಾಜ್ಯದಾದ್ಯಂತ ಮತ್ತೆ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ’ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಸಾರಿಗೆ ನೌಕರರುಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಮುಷ್ಕರದ ವೇಳೆ ವಿವಿಧ ಬೇಡಿಕೆಗಳ ಪೈಕಿ ಒಂಬತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಇದಕ್ಕಾಗಿ ನೀಡಲಾಗಿದ್ದ ಮೂರು ತಿಂಗಳ ಗಡುವಿನಲ್ಲಿ ಒಂದೂವರೆ ತಿಂಗಳು ಕಳೆದಿದೆ. ಆದರೂ ಯಾವ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ’ ಎಂದು ದೂರಿದರು.
‘ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೆಲವು ಬೇಡಿಕೆ ಈಡೇರಿಸಿರುವುದಾಗಿ ಹೇಳಿದ್ದಾರೆ. ಆದರೆ, ಈ ಕುರಿತು ಅಧಿಕೃತ ಆದೇಶ ಹೊರಬಂದಿಲ್ಲ. ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ನಿಗದಿತ ಗಡುವಿನೊಳಗೆ ಸಾರಿಗೆ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಷ್ಕರ ಅನಿವಾರ್ಯ’ ಎಂದರು.
‘ಮುಷ್ಕರದ ಅವಧಿಯಲ್ಲಿ ಸಾರಿಗೆ ನೌಕರರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ನೌಕರರ ಅಮಾನತ್ತು ಆದೇಶ ರದ್ದುಗೊಳಿಸಿ, ನೇಮಕ ಮಾಡಿಕೊಳ್ಳಬೇಕು. ಬಿಎಂಟಿಸಿಯಲ್ಲಿ ಎರಡು ಪಾಳಿಗಳ ಕರ್ತವ್ಯ ಪುನರಾರಂಭಿಸಬೇಕು. ಅವರಿಗೆ ಮೊದಲಿನಂತೆ ರಜೆ, ಭತ್ಯೆ ನೀಡಬೇಕು. ಹೆಚ್ಚುವರಿ ಕರ್ತವ್ಯದ ಅವಧಿ ಕಡಿತಗೊಳಿಸಬೇಕು’ ಎಂದು ಆಗ್ರಹಿಸಿದರು.
ದೆಹಲಿಗೆ ರಾಜ್ಯದ ರೈತರು: ‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ರಾಜ್ಯದಿಂದ ಐದು ಸಾವಿರ ರೈತರು ಫೆ.3ರಂದು ಅಲ್ಲಿಗೆ ತೆರಳಲಿದ್ದು, ಫೆ.5ರಿಂದ 7ರವರೆಗೆ ನಡೆಯಲಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.