ADVERTISEMENT

‘ಪೊಗರು’ ದೃಶ್ಯ ತೆಗೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:19 IST
Last Updated 23 ಫೆಬ್ರುವರಿ 2021, 20:19 IST

ಬೆಂಗಳೂರು: ‘ಇತ್ತೀಚೆಗೆ ತೆರೆಕಂಡ ನಟ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಮಾನಿಸುವ ದೃಶ್ಯಗಳಿದ್ದು, ಅವುಗಳನ್ನು ಕೂಡಲೇ ಚಿತ್ರದಿಂದ ತೆಗೆಯಬೇಕು’ ಎಂದು ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಹಾಗೂ ಆಗಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಾನಕಿರಾಮ್ ಆಗ್ರಹಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಚಿತ್ರದಲ್ಲಿ ಹೋಮ ನಡೆಯುವ ಸಂದರ್ಭದಲ್ಲಿ ಬ್ರಾಹ್ಮಣರು, ಅರ್ಚಕರು ಹಾಗೂ ಪುರೋಹಿತರ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳನ್ನು ತರಲಾಗಿದೆ. ‘ಅರ್ಚನೆ, ಅಲಂಕಾರ, ಅಭಿಷೇಕ ಎಂದು ದುಡ್ಡು ಕೀಳ್ತೀರಾ..’ ಎನ್ನುವ ಅವಮಾನಕಾರಿ ಸಂಭಾಷಣೆಗಳಿವೆ’ ಎಂದು ಆರೋಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸ ಮೂರ್ತಿ,‘ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ದೇವಸ್ಥಾನಗಳಲ್ಲಿ ಅರ್ಚಕರು ಪೂಜಾ ಸಮಯದಲ್ಲಿ ಮಂತ್ರ ಹೇಳುತ್ತಿರುತ್ತಾರೆ. ಜೊತೆಗೆ ಏನೇನೋ ಆಸೆ ಪಡುತ್ತಿರುತ್ತಾರೆ. ತಟ್ಟೆ ಕಾಸಿಗಾಗಿ ಕೆಲ ಪೂಜಾರಿಗಳು ಕಾದಿರುತ್ತಾರೆ’ ಎಂದು ಹೇಳಿರುವುದು ಸರಿಯಲ್ಲ. ಅವರು ಕ್ಷಮೆಯಾಚಿಸಬೇಕು‘ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.