ADVERTISEMENT

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 11:15 IST
Last Updated 18 ನವೆಂಬರ್ 2020, 11:15 IST

ಮಂಡ್ಯ: ‘ಒಕ್ಕಲಿಗ ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಮುದಾಯಕ್ಕೆ ಶಕ್ತಿ ತುಂಬಬೇಕು’ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಬುಧವಾರ ಒತ್ತಾಯಿಸಿದರು.

‘ಇತ್ತೀಚಿನ ದಿನಗಳಲ್ಲಿ ಅಗತ್ಯ ಇಲ್ಲದಿದ್ದರೂ ಭಾಷೆ, ಜಾತಿಗೊಂದು ಪ್ರಾಧಿಕಾರ ರಚಿಸುವ ಮೂಲಕ ಸಮುದಾಯಗಳನ್ನು ಓಲೈಸಲಾಗುತ್ತಿದೆ. ಸಮುದಾಯಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯದಲ್ಲೂ ಕಡುಬಡವರಿದ್ದು, ಅವರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸಮುದಾಯದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಜಾತಿಗಳ ಉಪ ಪಂಗಡಗಳನ್ನು ಒಡೆದು ಜನಸಂಖ್ಯೆ ಕಡಿಮೆ ಎಂದು ಬಿಂಬಿಸುತ್ತಿದ್ದಾರೆ. ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿ ನೀಡಲಾಗಿದೆ. ಇದರಲ್ಲಿ ರೆಡ್ಡಿ, ಶೆಟ್ಟರು ಸೇರಿದಂತೆ ಇತರ ಜಾತಿಗಳನ್ನು ಸೇರಿಸಿ ನೈಜ ಫಲಾನುಭವಿಗಳಿಗೆ ಮೀಸಲಾತಿ ಸಿಗದಂತಾಗಿದೆ’ ಎಂದರು.

ADVERTISEMENT

‘ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿರುವ ಕುಡು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪಡೆಯಲು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅವರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದು, ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅವರನ್ನು 3ಎ ವರ್ಗಕ್ಕೆ ಸೇರಿಸಿ ರಾಜ್ಯಪತ್ರದಲ್ಲಿ ನಮೂದಿಸಬೇಕು ಎಂದು ಹಿಂದುಳಿದ ವರ್ಗದ ಆಯೋಗ ವರದಿ ಸಲ್ಲಿಸಿದ್ದರೂ ಅದು ಜಾರಿಯಾಗಿಲ್ಲ. ಕೂಡಲೇ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 16ರಷ್ಟು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಸಿ.ಆರ್‌.ರಮೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಎಲ್‌.ಕೃಷ್ಣ, ಸಂಘಟನಾ ಕಾರ್ಯದರ್ಶಿ ಚಂದ್ರು, ನಾಗೇಶ್‌ ಪಾಂಡವಪುರ, ಸೌಭಾಗ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.