ADVERTISEMENT

ಎಪಿಪಿ ಅಕ್ರಮ ನೇಮಕಾತಿ ಹಗರಣದ ಎರಡನೆ ಆರೋಪಿ ನಾರಾಯಣಸ್ವಾಮಿ ನೇಮಕಕ್ಕೆ ಸಿಎಂ ಒಲವು?

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:45 IST
Last Updated 17 ಜೂನ್ 2019, 19:45 IST
   

ಬೆಂಗಳೂರು: ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ಅಕ್ರಮ ನೇಮಕಾತಿ ಹಗರಣದ ಆರೋಪಿ, ಇಲ್ಲಿನ ಕಾನೂನು ಅಧಿಕಾರಿ ಕಚೇರಿ ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರನ್ನು ಪುನಃ ಅಭಿಯೋಗ ನಿರ್ದೇಶಕರ ಇಲಾಖೆ ಆಡಳಿತಾಧಿಕಾರಿ ಆಗಿ ನೇಮಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಲವು ತೋರಿದ್ದಾರೆ.

2013– 14ನೇ ಸಾಲಿನ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ಅಕ್ರಮ ನೇಮಕಾತಿ ಹಗರಣದಲ್ಲಿ ನಾರಾಯಣಸ್ವಾಮಿ 2ನೇ ಆರೋಪಿ.ಅಭಿಯೋಗ ನಿರ್ದೇಶಕರ ಕಚೇರಿ ನಿವೃತ್ತ ನಿರ್ದೇಶಕ ಚಂದ್ರಶೇಖರ ಹಿರೇಮಠ 1ನೇ ಆರೋಪಿ. ಈ ಇಬ್ಬರ ವಿರುದ್ಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಈ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಇದರ ನಡುವೆಯೇ, ನಾರಾಯಣಸ್ವಾಮಿ ಅವರನ್ನು ಅಭಿಯೋಗ ನಿರ್ದೇಶಕರ ಕಚೇರಿ ಆಡಳಿತಾಧಿಕಾರಿಯಾಗಿ ನೇಮಿಸಲು ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ. ಕುಮಾರಸ್ವಾಮಿಯ ಟಿಪ್ಪಣಿ ಆಧರಿಸಿ ತರಾತುರಿಯಲ್ಲಿ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಕಸರತ್ತು ನಡೆಯುತ್ತಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇದೇ 13ರಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು, ‘ಆಡಳಿತಾಧಿಕಾರಿ ಹುದ್ದೆ ಖಾಲಿ ಇದೆಯೇ’ ಎಂಬ ಮಾಹಿತಿಯೊಂದಿಗೆ ಜೂನ್‌ 17ರೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಕೇಳಿದ್ದಾರೆ. ‘ಈ ಹುದ್ದೆ ಖಾಲಿ ಇದೆ’ ಎಂದು ಹೇಳಿ ಸೋಮವಾರ ಪ್ರಸ್ತಾವನೆ ಕಳುಹಿಸಲಾಗಿದೆ.

ನಾರಾಯಣಸ್ವಾಮಿ ಪರವಾಗಿ ಮುಖ್ಯಮಂತ್ರಿ ಟಿಪ್ಪಣಿ ಹಾಕಿರುವುದು ಇದು ಎರಡನೇ ಸಲ. ನಾರಾಯಣಸ್ವಾಮಿ ಅವರನ್ನು ಅಭಿಯೋಗ ಇಲಾಖೆ ಎಚ್‌ಕ್ಯೂಎ ಆಗಿ ನೇಮಿಸಬೇಕು ಎಂದು 2018ರ ಜುಲೈ 27ರಂದು ದೇವನಹಳ್ಳಿ ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ ಶಿಫಾರಸು ಪತ್ರ ನೀಡಿದ್ದರು. ಅದರ ಮೇಲೆಯೇ ‘ಅಗತ್ಯ ಕ್ರಮಕ್ಕಾಗಿ ಸೂಚಿಸಿದೆ’ ಎಂದು ಕುಮಾರಸ್ವಾಮಿ ಟಿಪ್ಪಣಿ ಹಾಕಿದ್ದರು.

ದೋಷಾರೋಪ ಪಟ್ಟಿ: ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿ ಮತ್ತು ಎಜಿಪಿಗಳ ನೇಮಕಕ್ಕೆ ಪರೀಕ್ಷೆ ನಡೆಸಿತ್ತು.‍ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಸಂಬಂಧ ತೀರ್ಥಹಳ್ಳಿಯ ವಕೀಲ ಎಚ್.ಟಿ. ರವಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು.

ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ‘ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರು ಅಭಿಯೋಗ ನಿರ್ದೇಶಕರ ಜತೆಗೂಡಿ ಅಕ್ರಮ ಎಸಗಿದ್ದಾರೆ. ತಮಗೆ ಬೇಕಾದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಲು ಅಂಕಗಳನ್ನು ತಿದ್ದಿದ್ದಾರೆ. ಅಂಕ ತಿದ್ದಿರುವುದು ಮತ್ತು ಮೌಲ್ಯಮಾಪಕರ ಸಹಿ ನಕಲು ಮಾಡಿರುವುದು ಎಫ್‌ಎಸ್‌ಎಲ್‌ನ (ವಿಧಿವಿಜ್ಞಾನ ಪ್ರಯೋಗಾಲಯ) ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

ಈ ಕುರಿತ ಪ್ರತಿಕ್ರಿಯೆಗೆ ಗೃಹ ಇಲಾಖೆ ಎಸಿಎಸ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಆಗಿತ್ತು.

ದೋಷಾರೋಪ ಪಟ್ಟಿ

ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿ ಮತ್ತು ಎಜಿಪಿಗಳ ನೇಮಕಕ್ಕೆ ಪರೀಕ್ಷೆ ನಡೆಸಿತ್ತು.‍ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಸಂಬಂಧ ತೀರ್ಥಹಳ್ಳಿಯ ವಕೀಲ ಎಚ್.ಟಿ. ರವಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು.

ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ‘ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರು ಅಭಿಯೋಗ ನಿರ್ದೇಶಕರ ಜತೆಗೂಡಿ ಅಕ್ರಮ ಎಸಗಿದ್ದಾರೆ. ತಮಗೆ ಬೇಕಾದ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಲು ಅಂಕಗಳನ್ನು ತಿದ್ದಿದ್ದಾರೆ. ಅಂಕ ತಿದ್ದಿರುವುದು ಮತ್ತು ಮೌಲ್ಯಮಾಪಕರ ಸಹಿ ನಕಲು ಮಾಡಿರುವುದು ಎಫ್‌ಎಸ್‌ಎಲ್‌ನ (ವಿಧಿವಿಜ್ಞಾನ ಪ್ರಯೋಗಾಲಯ) ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಈ ಕುರಿತ ಪ್ರತಿಕ್ರಿಯೆಗೆ ಗೃಹ ಇಲಾಖೆ ಎಸಿಎಸ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.