ADVERTISEMENT

ಮಂಕಿಪಾಕ್ಸ್ ತಡೆಗಟ್ಟಲು ಬೆಂಗಳೂರಿನಲ್ಲಿ ಇಂದು ಸಭೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:15 IST
Last Updated 1 ಆಗಸ್ಟ್ 2022, 21:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ದಾವಣಗೆರೆ:‘ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ತಡೆಗಟ್ಟುವ ಸಂಬಂಧ ಚರ್ಚೆ ನಡೆಸಲು ಆಗಸ್ಟ್ 2ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

’ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸುವುದು, ಪ್ರಯೋಗಾಲಯಗಳ ಸ್ಥಾಪನೆ ಸಂಬಂಧ ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಔಷಧಗಳನ್ನು ಒದಗಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ‘ ಎಂದು ಹೇಳಿದರು.

ವಿಮಾನ, ರೈಲು, ಬಸ್‌ ನಿಲ್ದಾಣಗಳಲ್ಲಿ ತಪಾಸಣೆ

ಬೆಂಗಳೂರು: ದೇಶದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ 24 ಗಂಟೆಯೂ ಪ್ರಯಾಣಿಕರ ತಪಾಸಣೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ADVERTISEMENT

ಆರೋಗ್ಯ ಇಲಾಖೆ ಆಯುಕ್ತರು ಈ ಸಂಬಂಧ ಆದೇಶ ಹೊರಡಿಸಿದ್ದು, ಬಿಬಿಎಂಪಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಲು ಸೂಚಿಸಲಾಗಿದೆ.

ಶಂಕಿತ ಪ್ರಕರಣಗಳ ಸಂಪರ್ಕಿತರ ಪತ್ತೆ ಮಾಡಬೇಕು. ಅವರನ್ನು 21 ದಿನ ತೀವ್ರ ನಿಗಾವಹಿಸಬೇಕು. ಮಂಕಿಪಾಕ್ಸ್‌ ಲಕ್ಷಣಗಳು ಕಂಡುಬಂದರೆ ಕೂಡಲೇ ಪರೀಕ್ಷೆಗೊಳಪಡಿಸಿ, ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮಾದರಿ ಪರೀಕ್ಷೆಯನ್ನು ಬೆಂಗಳೂರಿನಲ್ಲಿರುವ ನಿಗದಿತ ಪ್ರಯೋಗಶಾಲೆಯಲ್ಲಿ ನಡೆಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ.

ಕೇರಳ: ಮೃತ ಯುವಕನಲ್ಲಿ ಮಂಕಿಪಾಕ್ಸ್‌ ದೃಢ

ತಿರುವನಂತಪುರ:ಕೇರಳದ ತ್ರಿಶೂರಿನಲ್ಲಿಶನಿವಾರ ಮೃತಪಟ್ಟ 22 ವರ್ಷದ ಯುವಕನಲ್ಲಿನ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆಯ ಅಲಪುಳದ ಘಟಕದಲ್ಲಿ ಪರೀಕ್ಷಿಸಿದ್ದು, ಮಂಕಿಪಾಕ್ಸ್‌ ವೈರಾಣು ಇರುವುದು ದೃಢಪಟ್ಟಿದೆ. ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿಯಲ್ಲೂ ಸೋಂಕು ದೃಢಪಡಿಸಿದೆ.

ದೇಶದಲ್ಲಿ ಮಂಕಿಪಾಕ್ಸ್‌ ರೋಗದಿಂದ ಸಾವು ಸಂಭವಿಸಿದ ಮೊದಲ ಪ್ರಕರಣ ಇದಾಗಿದೆ.ಮೊದಲ ಮೂರು ಪ್ರಕರಣಗಳೂ ಕೇರಳದಲ್ಲೇ ಪತ್ತೆಯಾಗಿದ್ದವು. ಸಂಯುಕ್ತ ಅರಬ್‌ ಸಂಸ್ಥಾನದಿಂದ (ಯುಎಇ)
ವಾಪಸಾದ ಮೂವರಲ್ಲಿ ರೋಗ ಪತ್ತೆಯಾಗಿತ್ತು.
ನಾಲ್ಕನೇ ಪ್ರಕರಣ ಪಶ್ಚಿಮ ದೆಹಲಿಯಲ್ಲಿ
ವರದಿಯಾಗಿತ್ತು.

ಮಂಕಿಪಾಕ್ಸ್‌ ರೋಗಿಗಳಿಗೆ ಚಿಕಿತ್ಸೆ ವಿಳಂಬ: ಮಂಕಿಪಾಕ್ಸ್‌ ಸೋಂಕಿನಲ್ಲಿ ಮರಣ ಪ್ರಮಾಣ ಕಡಿಮೆ ಇದೆ ಎನ್ನುವ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.