ADVERTISEMENT

‘ಬೆಲೆ ಕೊರತೆ ಪಾವತಿ’ ಯೋಜನೆ ಜಾರಿಗೆ ಕೃಷಿ ಬೆಲೆ ಆಯೋಗ ಸಲಹೆ

ರಾಜ್ಯದಲ್ಲಿ ಟೊಮೆಟೊ, ಈರುಳ್ಳಿ ಬೆಲೆ ಕುಸಿತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST

ಬೆಂಗಳೂರು: ಟೊಮೆಟೊ ಮತ್ತು ಈರುಳ್ಳಿ ದರಗಳು ಕುಸಿಯುತ್ತಿರುವುದರಿಂದ ಬೆಂಬಲ ಬೆಲೆ ನೀಡುವುದರ ಬದಲು ‘ಬೆಲೆ ಕೊರತೆ ಪಾವತಿ’ ಯೋಜನೆ ಜಾರಿಗೊಳಿಸಬೇಕು ಎಂದು ಕೃಷಿ ಬೆಲೆ ಆಯೋಗ ಸಲಹೆ ನೀಡಿದೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ, ಬೇಗನೆ ಹಾಳಾಗುವ ತರಕಾರಿಗಳನ್ನು ಸರ್ಕಾರ ಮಧ್ಯ ಪ್ರವೇಶಿಸಿ ಖರೀದಿಸಿದರೂ ಬಳಿಕ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವುದು ಕಷ್ಟ. ಇದರಿಂದ ರೈತರು ನಷ್ಟ ಅನುಭವಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರ ಬದಲಿಗೆ ಬೆಂಬಲ ಬೆಲೆ ಹಾಗೂ ರೈತರಿಗೆ ದೊರೆತ ಬೆಲೆಗಳ ನಡುವಿನ ವ್ಯತ್ಯಾಸದ ಮೊತ್ತವನ್ನು ಪಾವತಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಹರಿಯಾಣ ರಾಜ್ಯವು ಪ್ರಾಯೋಗಿಕವಾಗಿಟೊಮೆಟೊ ಮತ್ತು ಈರುಳ್ಳಿಗಳಿಗೆ ಕಳೆದ ವರ್ಷ ಜಾರಿ ಮಾಡಿತ್ತು. ರಾಜ್ಯದಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕನಿಷ್ಠ ₹100 ಕೋಟಿಯಿಂದ ಗರಿಷ್ಠ ₹ 500 ಕೋಟಿಗಳ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಕೃಷಿ ಬೆಳೆಗಳಲ್ಲಿ ಈ ಯೋಜನೆಯ ಹೊರೆ ಹಂಚಿಕೊಳ್ಳಲುಕೇಂದ್ರ ಸರ್ಕಾರ ಸಿದ್ಧವಿದೆ. ಇದನ್ನು ತೋಟಗಾರಿಕಾ ಬೆಳೆಗಳಿಗೂ ವಿಸ್ತರಿಸುವಂತೆ ಪ್ರಸಾಪ ಸಲ್ಲಿಸುವುದು ಸೂಕ್ತ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ, ರಾಜ್ಯದ ರೈತರ ಹಿತರಕ್ಷಣೆ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಂಚಿತವಾಗಿ ನೋಂದಾಯಿಸಿದ ರೈತರು ತಾವು ಬೆಳೆದ ಉತ್ಪನ್ನವನ್ನು ಅಧಿಕೃತವಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಪಾರದರ್ಶಕವಾಗಿ ಹರಾಜು ಪದ್ಧತಿಯಲ್ಲಿ ಮಾರಾಟ ಮಾಡಿದಾಗ ಧಾರಣೆ ಕಡಿಮೆ ಇದ್ದರೆ, ರೈತರಿಗೆ ದೊರೆತ ಬೆಲೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ವ್ಯತ್ಯಾಸದ ಹಣವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ವರ್ಗಾಯಿಸಬೇಕು.

ರಾಜ್ಯದಲ್ಲಿ ಈಗ ಟೊಮೆಟೊ ಹಾಗೂ ಈರುಳ್ಳಿ ಉತ್ಪನ್ನಗಳ ಆವಕ ಅಧಿಕವಾಗಿದೆ. ಈ ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸುವುದಿಲ್ಲ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಆಯಾ ರಾಜ್ಯ ಸರ್ಕಾರಗಳೇ ಸೂಕ್ತ ಬೆಂಬಲ ನಿರ್ಧರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಖರೀದಿಸಬೇಕಾಗುತ್ತದೆ ಎಂದು ಆಯೋಗದ ಅಧ್ಯಕ್ಷ ಪ್ರಕಾಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.