ADVERTISEMENT

ಧಾರ್ಮಿಕ ಪರಿಷತ್‌ ವಜಾಗೊಳಿಸಲು ಆಗ್ರಹ; ಅರ್ಚಕರಿಂದ ಮುಜರಾಯಿ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 20:00 IST
Last Updated 22 ಸೆಪ್ಟೆಂಬರ್ 2021, 20:00 IST
ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಅರ್ಚಕರು ಮನವಿ ಸಲ್ಲಿಸಿದರು. ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆಎಸ್‌ಎನ್‌ ದೀಕ್ಷಿತ್, ಉಪಾಧ್ಯಕ್ಷ ಎಸ್‌.ಆರ್. ಶೇಷಾದ್ರಿ ಭಟ್ಟರ್, ಪಟ್ಟಾಭಿರಾಮ ಭಟ್ಟರ್, ಭಕ್ತವತ್ಸಲ, ಟಿ.ಕೆ. ಶ್ಯಾಮಸುಂದರ ದೀಕ್ಷಿತ್, ಮುರುಳಿ, ರಾಜನ್, ರಾಜ ದೀಕ್ಷಿತ್, ಗಣೇಶ್ ಇದ್ದರು
ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಅರ್ಚಕರು ಮನವಿ ಸಲ್ಲಿಸಿದರು. ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆಎಸ್‌ಎನ್‌ ದೀಕ್ಷಿತ್, ಉಪಾಧ್ಯಕ್ಷ ಎಸ್‌.ಆರ್. ಶೇಷಾದ್ರಿ ಭಟ್ಟರ್, ಪಟ್ಟಾಭಿರಾಮ ಭಟ್ಟರ್, ಭಕ್ತವತ್ಸಲ, ಟಿ.ಕೆ. ಶ್ಯಾಮಸುಂದರ ದೀಕ್ಷಿತ್, ಮುರುಳಿ, ರಾಜನ್, ರಾಜ ದೀಕ್ಷಿತ್, ಗಣೇಶ್ ಇದ್ದರು   

ಬೆಂಗಳೂರು: ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್‌ಗಳನ್ನು ವಜಾ ಮಾಡಬೇಕು ಎಂದುಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಸಲ್ಲಿಸಿದೆ.

‘ಈ ಎರಡು ಪರಿಷತ್‌ಗಳು ಅರ್ಚಕರ ಕುಂದು–ಕೊರತೆಗಳನ್ನು ಆಲಿಸುವ ಬದಲು ಕೇವಲ ರಾಜಕೀಯಕ್ಕೆ ಸೀಮಿತವಾಗಿವೆ. ಐಎಎಸ್‌ ಮತ್ತು ಕೆಎಎಸ್ ಅಧಿಕಾರಿಗಳಿಗೆ ದೇವಸ್ಥಾನಗಳ ಬಗ್ಗೆ ಅರಿವೇ ಇಲ್ಲವಾಗಿದ್ದು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಒಕ್ಕೂಟ ಆರೋಪಿಸಿದೆ.

‘ಮುಜರಾಯಿ ದೇವಸ್ಥಾನಗಳಲ್ಲಿ ಸಹಾಯಕ ಅರ್ಚಕರ ಪರಿಚಾ‌ರಕರ ಹುದ್ದೆ, ಸ್ಥಾನಿಕರು, ಅಡುಗೆಯವರು, ಒಳಾಂಗಣ ನೌಕರರು, ಮಂಗಳವಾದ್ಯ ನುಡಿಸುವವರ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇವೆ. ಇದರಿಂದ ದೇವಸ್ಥಾನದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಕೂಡಲೇ ಆ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್‌. ದೀಕ್ಷಿತ್ ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.‌

ADVERTISEMENT

‘ರಾಜ್ಯದ ‌‘ಎ’, ‘ಬಿ’ ಮತ್ತು ‘ಸಿ’ ದರ್ಜೆ ದೇವಸ್ಥಾನಗಳ ಪ್ರಧಾನ ಆರ್ಚಕರನ್ನು ಆಹ್ವಾನಿಸಿ ಅವರ ಕುಂದು–ಕೊರತೆಗಳನ್ನು ಆಲಿಸಬೇಕು. ಪ್ರತಿ ವರ್ಷ ನಡೆಯಬೇಕಿರುವ ರಥೋತ್ಸವ, ಪವಿತ್ರೋತ್ಸವ, ಲಕ್ಷಾರ್ಚನೆ ಮೊದಲಾದ ಸೇವೆಗಳನ್ನು ಕೋವಿಡ್ ನಿಯಮಗಳಿಗೆ ಅನುಗುಣವಾಗಿ ಆಯಾ ಸೇವಾಕರ್ತರನ್ನು ಮಾತ್ರ ಕರೆಸಿ ನಡೆಸಲು ಸೂಕ್ತ ಆದೇಶ ನೀಡಬೇಕು. ರಾಜ್ಯದ ‘ಎ’ ಮತ್ತು ‘ಬಿ’ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಶೇ 35ರಷ್ಟನ್ನು ಸಿಬ್ಬಂದಿ ವೇತನಕ್ಕೆ ನೀಡಲಾಗುತ್ತಿದೆ. ಇದನ್ನು ಶೇ 45ಕ್ಕೆ ಹೆಚ್ಚಿಸಿ 6ನೇ ವೇತನ ಆಯೋಗ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಸಿ’ ವರ್ಗದ ದೇವಾಲಯಗಳಿಗೆ ತಸ್ತೀಕ್ ಹಣದಲ್ಲಿ ಈಗಿನ ಧಾರಣೆಯಲ್ಲಿ ಪೂಜೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ತಿಂಗಳಿಗೆ ₹4 ಸಾವಿರ ಇರುವ ತಸ್ತೀಕ್ ಮೊತ್ತವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.