ADVERTISEMENT

ಸರ್ಕಾರಿ ಶಾಲೆಗೆ ಸಹಾಯ ನೀಡುವವರ ನೆರವಿಗೆ ಆ್ಯ‍ಪ್‌: ಸಚಿವ ಸುರೇಶ್‌ಕುಮಾರ್‌

ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 19:23 IST
Last Updated 30 ಅಕ್ಟೋಬರ್ 2019, 19:23 IST
ಎಸ್.ಸುರೇಶ್ ಕುಮಾರ್
ಎಸ್.ಸುರೇಶ್ ಕುಮಾರ್   

ಕಲಬುರ್ಗಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವವರು, ಆರ್ಥಿಕ ನೆರವು ನೀಡುವವರು, ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪೋಕನ್‌ ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಶಿಕ್ಷಣ ನೀಡಲು ಬಯಸುವವರಿಗೆ ತ್ವರಿತವಾಗಿ ಅನುಮತಿ ನೀಡಲು ಶಿಕ್ಷಣ ಇಲಾಖೆ ಆ್ಯಪ್‌ ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ತಿಳಿಸಿದರು.

‘ಶಾಲೆಗಳಿಗೆ ನೆರವು ನೀಡಬೇಕು ಎಂದರೆ ಹತ್ತಾರು ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ ಮಾಡುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಆ್ಯಪ್‌ ಬಿಡುಗಡೆ ಮಾಡಲಿದ್ದಾರೆ’ ಎಂದು ಬುಧವಾರ ಇಲ್ಲಿ ತಿಳಿಸಿದರು.

ಫಲಿತಾಂಶ ಹೆಚ್ಚಳಕ್ಕೆ ಸಭೆ: ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನವೆಂಬರ್‌ 8ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್‌ ನಡೆಸಲಾಗುವುದು ಎಂದರು.

ADVERTISEMENT

ಶಾಲೆಗಳ ದುರಸ್ತಿಗೆ ₹199 ಕೋಟಿ: ನೆರೆಯಿಂದಾಗಿ ಭಾಗಶಃ ಜಖಂಗೊಂಡಿ ರುವ ಶಾಲೆಗಳ ದುರಸ್ತಿಗೆ ಈಗಾಗಲೇ ಸರ್ಕಾರ ₹199 ಕೋಟಿ ಬಿಡುಗಡೆ ಮಾಡಿದೆ. ಸಂಪೂರ್ಣ ನೆಲಕಚ್ಚಿರುವ ಶಾಲೆಗಳ ಪುನರ್‌ ನಿರ್ಮಾಣಕ್ಕಾಗಿ ₹ 530 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಸುಗಮ ಆಡಳಿತದ ದೃಷ್ಟಿಯಿಂದ ಕಲಬುರ್ಗಿ ಜಿಲ್ಲೆಯನ್ನೂ ಎರಡು ಶೈಕ್ಷಣಿಕ ಜಿಲ್ಲೆಗಳನ್ನಾಗಿ ವಿಭಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

‘‌ಸಂಘದ ಹೆಸರಲ್ಲಿ ಶಿಕ್ಷಕರು ಗೈರಾದರೆ ಕ್ರಮ’

‘ಶಿಕ್ಷಕರಾದವರಿಗೆ ಮಕ್ಕಳಿಗೆ ಬೋಧನೆ ಮಾಡುವುದು ಮುಖ್ಯ ಕೆಲಸ. ಅದನ್ನು ಬಿಟ್ಟು ತರಗತಿಗಳಿಗೆ ಚಕ್ಕರ್‌ ಹೊಡೆದು ಸಂಘಟನೆ ಕೆಲಸಕ್ಕಾಗಿ ಶಾಲೆಯಿಂದ ಹೊರಗುಳಿಯುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಶಾಲಾ ಅವಧಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಬೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈ ಸಂದರ್ಭದಲ್ಲಿ ಸಂಘದ ಚಟುವಟಿಕೆ ನಡೆಸುವುದು ಸರಿಯಲ್ಲ. ಸೂಚನೆ ಮೀರಿಯೂ ತರಗತಿಗೆ ಗೈರಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಡಿಡಿಪಿಐಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.