ADVERTISEMENT

ಸಿದ್ಧಗಂಗೆಯಲ್ಲಿ ಬಿಲ್ವಪತ್ರೆ ಸಸಿ ನೆಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ತುಮಕೂರಿನಲ್ಲಿ ರೈತ ಸಮಾವೇಶಕ್ಕೆ ಪ್ರಧಾನಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 15:12 IST
Last Updated 1 ಜನವರಿ 2020, 15:12 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   

ತುಮಕೂರು: ಕಿಸಾನ್ ಸಮ್ಮಾನ್ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಹಾಗೂ ರೈತ ಸಮಾವೇಶಕ್ಕೆ ಗುರುವಾರ (ಜ.2) ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಲ್ಲಿ ಚಾಲನೆ ನೀಡುವರು. ಹೊಸ ವರ್ಷದ ಆರಂಭದಲ್ಲಿಯೇ ನಗರಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಕಲ್ಪತರು ನಾಡಿನ ನಾಗರಿಕರಲ್ಲಿ ಸಂಭ್ರಮ ಮನೆ ಮಾಡಿದೆ.

ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್‌ಗೆ 2.10ಕ್ಕೆ ಬರುವ ಪ್ರಧಾನಿ, ಅಲ್ಲಿಂದ ಸಿದ್ಧಗಂಗಾ ಮಠಕ್ಕೆ ತೆರಳುವರು. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆಯುವರು. ಅಲ್ಲಿ ಕ್ಷಣ ಕಾಲ ಧ್ಯಾನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಂತರ ಗದ್ದುಗೆ ಸಮೀಪ ಬಿಲ್ಪಪತ್ರೆ ಸಸಿ ನೆಡುವರು. ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡುವರು.

ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವರು. 40 ನಿಮಿಷ ಪ್ರಧಾನಿ ಮಠದಲ್ಲಿ ಇರಲಿದ್ದಾರೆ. ಅಲ್ಲಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇಲ್ಲಿ 60 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ 3,000 ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ 2,250 ಹಾಗೂ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಳಗಾವಿ, ಉಡುಪಿ ಜಿಲ್ಲೆಯ 1,750 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಐದು ಮಂದಿ ಎಸ್‌ಪಿಗಳು ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ ಬುಧವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಾರ್ಯಕ್ರಮದ ವೇದಿಕೆ ಪರಿಶೀಲಿಸಿದರು. ಪ್ರಧಾನಿ ಕಾರ್ಯಕ್ರಮ ಯಶಸ್ಸುಗೊಳಿಸಲು ರಾಜ್ಯದ ಸಚಿವರ ದಂಡೇ ನಗರದಲ್ಲಿ ಬೀಡು ಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.