ADVERTISEMENT

ಬಸ್ ಮಾಲೀಕರ ಲಾಭದಾಸೆಗೆ ಬೇಸತ್ತು ಗ್ರಾಹಕರ ಪರ ದೂರು ನೀಡಿದ ಸಾಗರದ ಬಸ್ ಏಜೆಂಟ್

ಅಸಹಾಯಕ ಪ್ರಯಾಣಿಕರ ಪರ ದನಿ, ಸೆ.6ಕ್ಕೆ ವಿಚಾರಣೆ

ಆರ್‌.ಜೆ.ಯೋಗಿತಾ
Published 4 ಸೆಪ್ಟೆಂಬರ್ 2018, 13:41 IST
Last Updated 4 ಸೆಪ್ಟೆಂಬರ್ 2018, 13:41 IST
ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು (ಸಾಂದರ್ಭಿಕ ಚಿತ್ರ)   

ಬೆಂಗಳೂರು:ಹಬ್ಬಸಾಲು, ಸರಣಿ ರಜೆ ಇದ್ದಾಗ ಏಕಾಏಕಿ ಪ್ರಯಾಣ ದರ ಹೆಚ್ಚಿಸಿ ಗ್ರಾಹಕರನ್ನು ಶೋಷಿಸುತ್ತಿದ್ದ ಖಾಸಗಿ ಬಸ್‌ಗಳ ಮಾಲೀಕರ ಧೋರಣೆಯನ್ನು ಇದೀಗ ಗ್ರಾಹಕರು ಪ್ರಶ್ನಿಸಲು ಆರಂಭಿಸಿದ್ದಾರೆ. ಇಷ್ಟುದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಿದ್ದ ಮತ್ತುದಿನಪತ್ರಿಕೆಗಳು, ಸುದ್ದಿಮಾಧ್ಯಮಗಳಲ್ಲಿ ವರದಿಯಾಗಿ ತಣ್ಣಗಾಗುತ್ತಿದ್ದ ಈ ಅನುಕೂಲ ಸಿಂಧು ದರ ಏರಿಕೆ ಪ್ರವೃತ್ತಿಯ ವಿರುದ್ಧ ಸಾಗರದ ಬಸ್ ಏಜೆಂಟರ ಸಂಘದ ಅಧ್ಯಕ್ಷ ನಾಗರಾಜ್ಅಲ್ಲಿನ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರು ಆಧರಿಸಿಉಪವಿಭಾಗಾಧಿಕಾರಿ ನಾಗರಾಜಸಿಂಗ್ರೇರ್‌ಅವರು ಪ್ರಕಾಶ್ ಟ್ರಾವಲ್ಸ್, ಸೀಬರ್ಡ್ಸ್‌ ಬಸ್, ವಿನಯ ಟ್ರಾವೆಲ್ಸ್, ಕಡಲಮುತ್ತು ಟ್ರಾವೆಲ್ಸ್, ಗಜಮುಖ ಟ್ರಾವೆಲ್ಸ್, ವೈಷ್ಣವಿ ಟ್ರಾವೆಲ್ಸ್ ಮತ್ತು ಗಜಾನನ ಟ್ರಾವೆಲ್ಸ್‌ನ ಮಾಲೀಕರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತಿ 133ರ ಕಲಂ (ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ) ಅನ್ವಯ ಆ.31ರಂದುನೋಟಿಸ್ ಜಾರಿ ಮಾಡಿದ್ದಾರೆ.‘ಸೆ.6ರಂದು ಬೆಳಿಗ್ಗೆ 11 ಗಂಟೆಗೆ ಉಪ ವಿಭಾಗೀಯ ದಂಡಾಧಿಕಾರಿಯವರನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳೊಂದಿಗೆ ಸಮಜಾಯಿಷಿ ನೀಡಬೇಕು. ತಪ್ಪಿದಲ್ಲಿ ಅಗತ್ಯ ಕ್ರಮ ಜರುತಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ವಿಶೇಷ ಸಂದರ್ಭಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರ ನೆಮ್ಮದಿ ಕಾಪಾಡುವ ಹಿತದೃಷ್ಟಿಯಿಂದ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು’ ಎಂದು ಉಪವಿಭಾಗಾಧಿಕಾರಿ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT
ಬಸ್ ಏಜೆಂಟ್ ನಾಗರಾಜ್

ಹಬ್ಬವಿದ್ದಾಗ ಅಥವಾಸರಣಿ ರಜೆಯಿದ್ದಾಗ ಗಗನಕ್ಕೇರುವ ಖಾಸಗಿ ಬಸ್‌ ದರವನ್ನು ಕಂಡು ಮನೆಯಲ್ಲಿಸುಮ್ಮನೆಬೈಯುತ್ತಾ ಕುಳಿತುಕೊಳ್ಳುವ ಬದಲು ದೂರು ನೀಡಿ, ಬಿಸಿ ಮುಟ್ಟಿಸುವ ಕೆಲಸ ಮಾಡಿರುವ ನಾಗರಾಜ್ ಅವರ ಕಾರ್ಯ ರಾಜ್ಯದ ಗಮನ ಸೆಳೆದಿದೆ. ಸೆ.6ರಂದು ಸಾಗರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯನ್ನು ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಲ್ಲಿ ಇದೇ ರೀತಿಯ ದೂರು ದಾಖಲಾಗುವ ಸಾಧ್ಯತೆ ಇದೆ.

ಜನರ ಕಷ್ಟ ಸಹಿಸಲು ಅಗದೆ ದೂರು ನೀಡಿದೆ:‘ನನ್ನ ಸ್ನೇಹಿತರೊಬ್ಬರು ದುಬಾರಿ ದರ ತೆರಲಾಗದೆ ಹಬ್ಬಕ್ಕೆ ಊರಿಗೆ ಬರಲು ಆಗುತ್ತಿಲ್ಲ. ಅವರ ಅಸಹಾಯಕ ಪರಿಸ್ಥಿತಿ ನೋಡಿ, ಬೇಸತ್ತು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆ ಆಯುಕ್ತರಿಗೆ ದೂರು ನೀಡಿದೆ’ ಎಂದು ಸಾಗರದಿಂದನಾಗರಾಜ್‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮೂರಿನ ಎಷ್ಟೋ ಜನರು ಬೆಂಗಳೂರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿದ್ದಾರೆ. ಹಬ್ಬದ ದಿನಗಳಲ್ಲಿನಾಲ್ಕು ಜನರ ಕುಟುಂಬ ಊರಿಗೆ ಬಂದುಹೋಗಲುಹತ್ತು ಸಾವಿರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಸಾಮಾನ್ಯ ದಿನಗಳಲ್ಲಿ ಸಾಗರದಿಂದ ಬೆಂಗಳೂರಿಗೆ ಟಿಕೆಟ್ ದರ ₹400. ಆದರೆ ಈಗ ಸೀಸನ್ ಎಂದು ಬರೋಬ್ಬರು ₹1500ಕ್ಕೆ ಹೆಚ್ಚಿಸಿದ್ದಾರೆ. ಇದ್ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

ಸೆ.11ರಂದು ಬೆಂಗಳೂರಿನಿಂದ ಸಾಗರಕ್ಕೆ ₹1200

ದೂರಿನ ಜೊತೆಗೆ ಬೆಂಗಳೂರಿನಿಂದ ಸಾಗರಕ್ಕೆ ₹1200 ತೆತ್ತು ಪಡೆದಿರುವ ಟಿಕೆಟ್‌ನ ಪ್ರತಿಯನ್ನೂ ಹಾಜರುಪಡಿಸಿರುವ ನಾಗರಾಜ್, ‘ಸರ್ಕಾರ ಶೀಘ್ರ ಇತ್ತ ಗಮನಹರಿಸಬೇಕು. ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಪ್ಪಬೇಕು’ ಎಂದು ಆಗ್ರಹಿಸಿದರು.

ಎಲ್ಲ ಊರಿನ ಕಥೆಯೂ ಇದೆ:ರಾಜ್ಯದಲ್ಲಿ 25ಕ್ಕೂ ಹೆಚ್ಚು ಖಾಸಗಿ ಬಸ್‌ ಕಂಪೆನಿಗಳಿವೆ. ಅವುಗಳ 50 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಬೆಂಗಳೂರಿಗೆ ನಿತ್ಯವೂ 10 ಸಾವಿರ ಬಸ್‌ಗಳು ಬಂದು ಹೋಗುತ್ತಿವೆ. ಈ ಬಸ್‌ಗಳು ವಿಧಿಸುವದರ ಕೇಳಿದರೆ ನೀವು ಹೌಹಾರುತ್ತೀರಿ.

ಪಾಲೊ ಟ್ರಾವೆಲ್ಸ್‌ನಗರದಿಂದ ಮೈಸೂರಿಗೆ ಅತಿ ಹೆಚ್ಚು ಅಂದರೆ ₹1500 ದರ ನಿಗದಿಪಡಿಸಿದೆ. ಕೆಎಸ್‌ಆರ್‌ಟಿಸಿಯ ಐರಾವತ ಬಸ್‌ನಲ್ಲಿ ಪ್ರಯಾಣಿಸಿದರೂ ₹331 ತೆತ್ತು ಮೈಸೂರು ತಲುಪಬಹುದು. ಈ ದರ ಹೆಚ್ಚಳ ಕೇವಲ ಬೆಂಗಳೂರು– ಮೈಸೂರು ಮಾರ್ಗಕ್ಕಷ್ಟೇ ಸೀಮಿತವಾಗಿಲ್ಲ. ಹಬ್ಬದ ಸೀಸನ್‌ನಲ್ಲಿ ಖಾಸಗಿ ಬಸ್‌ಗಳಲ್ಲಿನೀವುಎಲ್ಲಿಗೆಪ್ರಯಾಣಿಸಬೇಕೆಂದರೂ,ದುಬಾರಿ ಮೊತ್ತವನ್ನು ತೆರಬೇಕಿದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಇತರ ಊರುಗಳಿಗೆ ₹400ರಿಂದ ₹1,000 ಇರುತ್ತಿದ್ದ ಖಾಸಗಿ ಬಸ್‌ಗಳ ದರ,ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ₹600ರಿಂದ ₹3,800ರವರೆಗೆ ಹೆಚ್ಚಾಗುವುದು ಸಾಮಾನ್ಯ ಎಂಬಂತೆ ಆಗಿದೆ.

‘ಕೆಲಸದ ಕಾರಣಕ್ಕೆ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ನನ್ನಂತಹ ಅನೇಕರು ಹಬ್ಬದಂದು ಊರ ಕಡೆ ಪ್ರಯಾಣ ಬೆಳೆಸುತ್ತಾರೆ. ಖಾಸಗಿ ಬಸ್‌ಗಳಿಗೆ ದುಬಾರಿ ಹಣವಿರುವುದು ತಿಳಿದು ಸಾಕಷ್ಟು ಮಂದಿ ಮೂರು ತಿಂಗಳ ಮುಂಚೆಯೇ ಕೆಎಸ್‌ಆರ್‌ಟಿಸಿ ಬಸ್‌, ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸಿರುತ್ತಾರೆ’ ಎಂದು ಸಾಫ್ಟ್‌ವೇರ್‌ ಎಂಜನಿಯರ್‌ ದೀಪಾ ವೀರ್‌ ಪ್ರತಿಕ್ರಿಯಿಸಿದರು.

ಸೆ.11ರ ಶಿವಮೊಗ್ಗ ರೈಲು ಭರ್ತಿಯಾಗಿದೆ

‘ಖಾಸಗಿ ಬಸ್‌ಗಳ ಪ್ರಯಾಣ ದರ ರಾಕೆಟ್‌ನಂತೆ ಏರಿದೆ. ಹವಾನಿಯಂತ್ರಿತ ಸ್ಲೀಪರ್‌, ನಾನ್‌ ಎ.ಸಿ ಸ್ಲೀಪರ್‌, ಎ.ಸಿ ಸೀಟರ್‌ ಹಾಗೂ ನಾನ್‌ ಎ.ಸಿ ಸೀಟರ್‌ ಬಸ್‌ಗಳ ಪ್ರಯಾಣ ದರಗಳು ಮೂರ್ನಾಲ್ಕು ಪಟ್ಟು ದುಬಾರಿಯಾಗಿವೆ. ಕಂಪನಿಗಳಲ್ಲಿ ಹಬ್ಬದ ಸಂದರ್ಭ ರಜೆ ಸಿಗುತ್ತದೆ ಎನ್ನುವ ಖಾತ್ರಿ ಇರುವುದಿಲ್ಲ. ಹೀಗಾಗಿನಮಗೆ ಸಾಕಷ್ಟು ಮೊದಲೇ ಟಿಕೆಟ್ ಕಾಯ್ದಿರಿಸಿಕೊಳ್ಳಲು ಆಗುವುದಿಲ್ಲ’ ಎಂದು ಮತ್ತೋರ್ವ ಉದ್ಯೋಗಿ ಸಂಪತ್‌ ಅಳಲು ತೋಡಿಕೊಂಡರು.

ಇನ್ನೂ ಆಗಿಲ್ಲ ದರ ನಿಗದಿ:ಈ ಬಗ್ಗೆ ಪ್ರಯಾಣಿಕರು ಎಷ್ಟೇ ಗೋಳು ತೋಡಿಕೊಂಡರೂ, ಸಾರಿಗೆ ಇಲಾಖೆ ಮಾತ್ರ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ರಾಜ್ಯದ ಖಾಸಗಿ ಬಸ್‌ಗಳಲ್ಲಿಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಕುರಿತು ಪ್ರಸ್ತಾವವೊಂದನ್ನು ಸಾರಿಗೆ ಇಲಾಖೆ ಆಯುಕ್ತರಾಗಿದ್ದ ಬಿ.ದಯಾನಂದ ಅವರು 2017ರ ನವೆಂಬರ್‌ನಲ್ಲಿ ಸಲ್ಲಿಸಿದ್ದರು.

ರಾಜ್ಯದ ಖಾಸಗಿ ಬಸ್‌ ಮಾಲೀಕರು, ಪ್ರಯಾಣಿಕರು ಹಾಗೂ ಸಾರಿಗೆ ತಜ್ಞರಿಂದ ಮಾಹಿತಿ ಪಡೆದು ಈ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಸ್ಟೇಟ್‌ ಹಾಗೂ ಕಾಂಟ್ರಾಕ್ಟ್‌ ಕ್ಯಾರೇಜ್‌ ಎರಡೂ ಬಗೆಯ ಖಾಸಗಿ ಬಸ್‌ಗಳ ಪ್ರಯಾಣ ದರಗಳ ಕಡಿವಾಣದ ವಿಚಾರವೂ ಪ್ರಸ್ತಾವನೆಯಲ್ಲಿ ಇತ್ತು.‘ಪ್ರಸ್ತಾವವನ್ನು ತ್ವರಿತವಾಗಿ ಜಾರಿಗೆ ತಂದು, ಖಾಸಗಿ ಬಸ್‌ ಕಂಪೆನಿಗಳ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂದು ಸ್ವತಃ ಆಯುಕ್ತರೇ ಕೋರಿದ್ದರೂ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ.

ರೈಲು ಸೀಟುಗಳು ಭರ್ತಿ: ಸೆ.11ರಂದು ಶಿವಮೊಗ್ಗಕ್ಕೆ ರೈಲು ಬುಕಿಂಗ್ ಮಾಡಲು ಸಾಧ್ಯವೇ ಇಲ್ಲ. ವೇಟಿಂಗ್ ಲಿಸ್ಟ್‌ 202ಕ್ಕೆ ಬಂದು ನಿಂತಿದೆ. ಸೆ.12ರ ರೈಲಿಗೆ ವೇಟಿಂಗ್ ಲಿಸ್ಟ್ 197 ಮುಟ್ಟಿದೆ. ಇನ್ನು ಹುಬ್ಬಳ್ಳಿ ಕಡೆಗೆ ಹೋಗುವವರ ನೆಚ್ಚಿನ ಆಯ್ಕೆ ಎನಿಸಿರುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸೆ.11ಕ್ಕೆ ವೇಟಿಂಗ್ ಲಿಸ್ಟ್ 226 ಮುಟ್ಟಿದೆ. ಸೆ.12ರ ವೇಟಿಂಗ್ ಲಿಸ್ಟ್ 301 ಮುಟ್ಟಿದ್ದು,, ಬುಕಿಂಗ್ ನಿಲ್ಲಿಸಲಾಗಿದೆ.ಬೇರೆ ಊರುಗಳಿಗೆ ಹೋಗುವ ರೈಲುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ರೈಲು ಹೊರಡುವ ಒಂದು ದಿನ ಮುನ್ನ ತತ್ಕಾಲ್‌ ಅಡಿ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ಇದೆ. ಈ ಸೀಟುಗಳು ಬೇಗನೇ ಭರ್ತಿಯಾಗುತ್ತಿವೆ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಬಸ್‌ಗಳಿಗೆ ದುಬಾರಿ ದರ ತೆತ್ತು ಪ್ರಯಾಣಿಯಬೇಕಾಗಿದೆ ಎಂದು ಶಿವಮೊಗ್ಗಕ್ಕೆ ಹೋಗಬೇಕಿರುವವರು ಅಲವತ್ತುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.