ADVERTISEMENT

ಖಾಸಗಿ ಶಾಲೆ ಶುಲ್ಕ: ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ: ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 11:56 IST
Last Updated 28 ಜನವರಿ 2021, 11:56 IST

ಬೆಂಗಳೂರು: ‘ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೊತೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದು ಶಿಕ್ಷಣ ಇಲಾಖೆ ನಿರ್ಧಾರ ಪ್ರಕಟಿಸಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ ಶಾಲೆಗಳು ಆರಂಭ ಆದಗಿನಿಂದಲೂ ಪೋಷಕರ ಜೊತೆ ಸರ್ಕಾರ ನಿಂತಿದ್ದೆ. ಶಾಲೆ ಆರಂಭಕ್ಕೂ ಮೊದಲು ಶುಲ್ಕ ವಸೂಲು ಮಾಡಬೇಡಿ ಎಂದು ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದ್ದೆವು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ತಿಂಗಳಲ್ಲಿ ಮಕ್ಕಳ ದಾಖಲಾತಿ ಆದೇಶ ಹೊರಡಿಸಿದ್ದೆವು’ ಎಂದರು.

‘ಫೋಷಕರ ಪರಿಸ್ಥಿತಿಯ ಅರಿವು ನಮಗಿದೆ. ಆದರೆ, ಅದೇ ಸಂದರ್ಭದಲ್ಲಿ, ಅನೇಕ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ವೇತನ ಇಲ್ಲದೆ, ಅರ್ಧ ಸಂಬಳಕ್ಕೆ ಕೆಲಸ ಮಾಡಿದ್ದಾರೆ. ಕೆಲಸವನ್ನೇ ಕಳೆದುಕೊಂಡವರೂ ಇದ್ದಾರೆ. ಪೋಷಕರ ಹಿತರಕ್ಷಣೆಯ ಜೊತೆ ಖಾಸಗಿ ಶಾಲೆಗಳನ್ನು ಹಿತವನ್ನೂ ನೋಡಬೇಕಿದೆ’ ಎಂದರು.

ADVERTISEMENT

ಶುಲ್ಕ ವಿಷಯದಲ್ಲಿ ಪೋಷಕರು ಇದೇ ಭಾನುವಾರ ಪ್ರತಿಭಟನೆ ನಡೆಸಲು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದಕ್ಕೂ ಮೊದಲೇ ಸರ್ಕಾರ ತೀರ್ಮಾನಕ್ಕೆ ಬರಲಿದೆ’ ಎಂದರು.

ಹಾಜರಾತಿ ಕಡ್ಡಾಯ ಅಲ್ಲ: ‘ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ. ಅಲ್ಲದೆ, ಶಾಲೆಗೆ ಹಾಜರಾಗುವವರು ಪೋಷಕರ ಒಪ್ಪಿಗೆ ಪತ್ರ ಪಡೆದುಕೊಂಡು ಬರಬೇಕು. ಈ ವರ್ಷದ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಶೇ 75 ಹಾಜರಾತಿಯಿಂದ ಈ ವರ್ಷ ವಿನಾಯಿತಿ ನೀಡಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.