ಬೆಂಗಳೂರು: ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿಗಳನ್ನು ಆಕರ್ಷಿಸಿ, ಕಾರ್ಖಾನೆಗಳನ್ನು ಸ್ಥಾಪಿಸಲು 901 ಎಕರೆ ಒಳಗೊಂಡ ನಾಲ್ಕು ಕ್ಲಸ್ಟರ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಮಂಗಳವಾರ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಹುಬ್ಬಳ್ಳಿ ಸಮೀಪದ ಕೋಟೂರ್–ಬೇಲೂರು ಬಳಿ 224.5 ಎಕರೆ, ಮೈಸೂರಿನ ಕೋಚನಹಳ್ಳಿ ಬಳಿ 245.67 ಎಕರೆ, ತುಮಕೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 218.20 ಎಕರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿ ಸಮೀಪ 213.14 ಎಕರೆ ಪ್ರದೇಶವನ್ನು ಸಜ್ಜುಗೊಳಿಸಲಾಗಿದೆ. ಅದಕ್ಕಾಗಿ ₹714.49 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
ಫಿಸಿಕ್ಸ್ ಮೋಟಾರ್ಸ್, ಕಾರ್ಬನ್ ಎಲೆಕ್ಟ್ರಾನಿಕ್ಸ್, ರವಿಸ್ಮಾಕ್, ಆಸ್ಟ್ರ ಡಿಫೆನ್ಸ್, ನ್ಯಾನೊಫಿಕ್ಸ್, ನ್ಯೂರಿಗಾಮಿ, ವೈಡ್ ಮೊಬಿಲಿಟಿ, ಕೆಮಿಯೋಪ್ಟಿಕ್ಸ್ ಹೆಲ್ತ್‌ಕೇರ್, ಗೋಪಾಲನ್ ಏರೋಸ್ಪೇಸ್, ಕ್ರಿಪ್ಟನ್ ಸಲ್ಯೂಷನ್ಸ್ ಮತ್ತಿತರ ಕಂಪನಿಗಳು ಆಸಕ್ತಿ ತೋರಿವೆ. ಎರಡು ಕ್ಲಸ್ಟರ್‌ಗಳ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಶೇ 50ರಷ್ಟು ವೆಚ್ಚ ಭರಿಸುತ್ತಿದೆ ಎಂದು ಹೇಳಿದರು.
ಉತ್ತರಕ್ಕೆ ಸೆಳೆಯುವುದನ್ನು ತಪ್ಪಿಸಿ:
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಭಾರತಕ್ಕೆ ಬರುವ ಕಂಪನಿಗಳು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ ತಕ್ಷಣ ಅವುಗಳನ್ನು ಉತ್ತರ ರಾಜ್ಯಗಳತ್ತ ಕೇಂದ್ರ ಸರ್ಕಾರವೇ ಸೆಳೆಯುತ್ತದೆ. ಹಾಗಾಗಿ, ಬಿಜೆಪಿ–ಜೆಡಿಎಸ್‌ನ ಸಂಸದರು ಕೇಂದ್ರದ ಮನವೊಲಿಸಿ, ಶೇ 50ರಷ್ಟು ಪ್ರೋತ್ಸಾಹಧನ ಕೊಡಿಸಬೇಕು. ರಾಜ್ಯದತ್ತಲೂ ಸೆಮಿಕಂಡಕ್ಟರ್ ಕಂಪನಿಗಳನ್ನು ಕರೆತರಬೇಕು ಎಂದು ಹೇಳಿದರು.
ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೆಲೆಗೊಳ್ಳುತ್ತಿರುವ ಸೆಮಿಕಂಡಕ್ಟರ್ ಕಂಪನಿಗಳಿಗೆ ಒಟ್ಟು ಹೂಡಿಕೆಯಲ್ಲಿ ಕೇಂದ್ರ ಸರ್ಕಾರ ಶೇ 50 ಹಾಗೂ ಅಲ್ಲಿನ ರಾಜ್ಯ ಸರ್ಕಾರಗಳು ಶೇ 30ರಷ್ಟು ಪ್ರೋತ್ಸಾಹಧನ ನೀಡುತ್ತಿವೆ. ಕರ್ನಾಟಕವೂ ಶೇ 30ರಷ್ಟು ಪ್ರೋತ್ಸಾಹಧನ ನೀಡಲು ಸಿದ್ಧವಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.