ADVERTISEMENT

ಮತಾಂತರ ನಿಷೇಧ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 4:20 IST
Last Updated 17 ಸೆಪ್ಟೆಂಬರ್ 2022, 4:20 IST
   

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಅಂಗೀಕಾರವಾದರೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ, ಧರ್ಮದ ಆಚರಣೆ, ಪ್ರಚಾರದ ಹಕ್ಕಿಗೆ ಚ್ಯುತಿಯಾಗಲಿದೆ ಎಂದುಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಮತಾಂತರ ನಿಷೇಧ ಮಸೂದೆ ಅಸಂವಿಧಾನಿಕ. ಸಂವಿಧಾನ ಪರಿಚ್ಛೇದ 25ರಿಂದ 28ರವರೆಗಿನ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕಿಗೆ ವಿರುದ್ಧವಾಗಿದೆ. ‘ಈಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಆಮಿಷ, ಒತ್ತಾಯ, ವಂಚನೆಗಳ ಮೂಲಕ ಮತಾಂತರಗಳು ಹೆಚ್ಚಾಗಿವೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಮಾಡಿವೆ. ಇಂತಹ ಮತಾಂತರ ತಡೆಗಟ್ಟಲು, ಮತಾಂತರಿಗಳನ್ನು ಶಿಕ್ಷಿಸಲು ರಾಜ್ಯದಲ್ಲಿ ಯಾವ ಶಾಸನವೂ ಇಲ್ಲ. ಹಾಗಾಗಿ, ಹೊಸ ಕಾಯ್ದೆ ರೂಪಿಸಲಾಗುತ್ತಿದೆ’ ಎಂದು ಮಸೂದೆಯ ಉದ್ದೇಶದಲ್ಲಿ ವಿವರಿಸಿದ್ದಾರೆ. ಆದರೆ, ಬಲವಂತದ ಮತಾಂತರ ಪ್ರಕರಣದ ಸಂಖ್ಯೆಯನ್ನೇ ನಮೂದಿಸಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಹೊಸದುರ್ಗದಲ್ಲಿ ತಮ್ಮ ತಾಯಿಯನ್ನು ಒತ್ತಾಯ ಪೂರ್ವಕವಾಗಿ ಮತಾತಂತರ ಮಾಡಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ ನೀಡಿದ್ದರು. ಆದರೆ, ಆರೋಪ ನಿರಾಕರಿಸಿದ್ದ ತಹಶೀಲ್ದಾರ್ ಅವರನ್ನೇ ಸರ್ಕಾರ ವರ್ಗಾವಣೆ ಮಾಡಿತು. 6 ತಿಂಗಳ ಹಿಂದೆ ಗೋವಿಂದ ಕಾರಜೋಳ ಅವರು ಮತಾಂತರಗೊಂಡವರ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದರು. ಮಸೂದೆ ರಚನೆಗೆ ಸರ್ಕಾರ ನೀಡುತ್ತಿರುವ ಸಮರ್ಥನೆಯ ಕುರಿತು ಸಂಶಯವಿದೆ’ ಎಂದರು.

ADVERTISEMENT

ಈ ಕಾಯ್ದೆ ಗುಜರಾತಿನಲ್ಲಿ ಜಾರಿಯಲ್ಲಿದೆ. ಅದನ್ನೇ ಇಲ್ಲಿ ಹಾಕಿದ್ದೇವೆ ಎಂದು ಕಾನೂನು ಸಚಿವರು ಹೇಳಿದ್ದಾರೆ. ಗುಜರಾತ್‌ನ ಈ ಕಾಯ್ದೆ ಅಂತರ್‌ಜಾತಿ ವಿವಾಹಕ್ಕೆ ಅಡ್ಡಿಯಾಗಲಿದೆ ಎಂದು ಕೋರ್ಟ್‌ 2021ರಲ್ಲಿ ತಡೆಯಾಜ್ಞೆ ನೀಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.