ADVERTISEMENT

₹ 5,500 ಕೋಟಿ ಹೂಡಿಕೆ, 7,200 ಉದ್ಯೋಗ ಸೃಷ್ಟಿ ನಿರೀಕ್ಷೆ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 16:17 IST
Last Updated 9 ಜುಲೈ 2025, 16:17 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ‘ರಾಜ್ಯ ಐಟಿ-ಬಿಟಿ ಇಲಾಖೆ ಅಮೆರಿಕದ ಮೂರು ಪ್ರಮುಖ ನಗರಗಳಲ್ಲಿ ನಡೆಸಿದ ರೋಡ್ ಶೋ ಯಶಸ್ವಿಯಾಗಿದ್ದು, ₹ 5,500 ಕೋಟಿ ಹೂಡಿಕೆಯೊಂದಿಗೆ 7,200 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್, ‘ಯುಎಸ್‌ನ ಬೋಸ್ಟನ್, ನ್ಯೂಯಾರ್ಕ್, ಸ್ಯಾನ್​ಫ್ರಾನ್ಸಿಸ್ಕೊ ನಗರಗಳಲ್ಲಿ 10 ದಿನ ಎರಡು ಸಮ್ಮೇಳನದಲ್ಲಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು, ಮೂರು ಸತ್ಕಾರ ಕೂಟಗಳೂ ನಡೆದಿದ್ದವು. 120 ಕ್ಕೂ ಹೆಚ್ಚು ಸಭೆಗಳಲ್ಲಿ ಭಾಗವಹಿಸಿದ ಪರಿಣಾಮ ರಾಜ್ಯಕ್ಕೆ ₹ 5,500 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ’ ಎಂದರು.

‘ಪ್ರಮುಖ ಸಂಸ್ಥೆಗಳು, ನವೋದ್ಯಮಗಳು, ಶ್ರೇಷ್ಠತೆಯ ಕೇಂದ್ರಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು  ಸಹಯೋಗ ಹೊಂದಲು ಬಯಸುವ ಕಂಪನಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅವಕಾಶಗಳನ್ನು ಮನದಟ್ಟು ಮಾಡಲಾಯಿತು. ಕರ್ನಾಟಕದಲ್ಲಿನ ಪ್ರತಿಭಾ ಸಂಪನ್ಮೂಲದ ಲಭ್ಯತೆಯನ್ನು ಬಳಸಿಕೊಳ್ಳುವ ಮೂಲಕ ಕಾರ್ಯಾಚರಣಾ ಮಾದರಿಯನ್ನು ವಿಶ್ವಮಟ್ಟಕ್ಕೆ ಪರಿಚಯಿಸುವುದು ಈ ರೋಡ್ ಶೋನ ಉದ್ದೇಶವಾಗಿತ್ತು’ ಎಂದರು.

ADVERTISEMENT

‘ರೋಡ್ ಶೋ ಉದ್ದಕ್ಕೂ ಕರ್ನಾಟಕದ ಪ್ರಗತಿಪರ ನೀತಿಗಳು, ಬಲಿಷ್ಠ ಪ್ರತಿಭಾ ಸಂಪನ್ಮೂಲ ಮತ್ತು ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ವ್ಯವಸ್ಥೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಈ ವೇಳೆ, ಹಲವು ವಿಚಾರಗಳ ಕುರಿತು ಪರಸ್ಪರ ತಿಳಿವಳಿಕೆ ಪತ್ರ ಮತ್ತು ಉದ್ದೇಶ ಪತ್ರಕ್ಕೆ ಸಹಿ ಹಾಕಲಾಗಿದೆ’ ಎಂದು ಅವರು ವಿವರಿಸಿದರು.

‘ಅಮೆರಿಕ ಅಧಿಕೃತ ಪ್ರವಾಸಕ್ಕೆ ಕೇಂದ್ರ ಸರ್ಕಾರ ನನಗೆ ಅನುಮತಿ ನೀಡಿದ್ದರೆ ಹೂಡಿಕೆ ಪ್ರಮಾಣ ದ್ವಿಗುಣಗೊಳ್ಳುತ್ತಿತ್ತು. ಹೆಚ್ಚಿನ ಉದ್ಯೋಗ ಅವಕಾಶಗಳೂ ಸೃಷ್ಟಿ ಆಗುತ್ತಿದ್ದವು’ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

‘ಕೇವಲ ಬೆಂಗಳೂರು ಅಥವಾ ಕರ್ನಾಟಕದಲ್ಲಿ ಮಾತ್ರ ಈ ಹೂಡಿಕೆ ಆಗುವುದಲ್ಲ. ಭಾರತಕ್ಕೆ ಹೂಡಿಕೆ ಆಗುತ್ತಿತ್ತು ಎಂಬುದನ್ನು ಕೇಂದ್ರ ಸರ್ಕಾರ ಯೋಚಿಸಬೇಕಿತ್ತು. ಅಮೆರಿಕ ಪ್ರವಾಸಕ್ಕೆ ನನಗೆ ಅನುಮತಿ ನೀಡದಿರುವ ಬಗ್ಗೆ ವಿದೇಶಾಂಗ ಸಚಿವರಿಗೆ ಪತ್ರ ಬರೆದು ಉತ್ತರ ಕೇಳಿದ್ದೇನೆ. ಆದರೆ, ಇದುವರೆಗೆ ಉತ್ತರ ಬಂದಿಲ್ಲ’ ಎಂದರು. ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಸೇರಿದಂತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.