ADVERTISEMENT

‘ಪಾಕ್‌ ಪರ ಘೋಷಣೆ: ತೀವ್ರ ತನಿಖೆ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 20:14 IST
Last Updated 23 ಫೆಬ್ರುವರಿ 2020, 20:14 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಮೈಸೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ರುವ ಅಮೂಲ್ಯಾ ಹಿಂದೆ ಇರುವ ಸಂಘಟನೆಗಳನ್ನು ಬಯಲಿಗೆಳೆಯಲು ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ ಮಾತನಾಡಿ, ಅಮೂಲ್ಯಾ ಘೋಷಣೆ ಕೂಗಿರುವುದು ಷಡ್ಯಂತ್ರದ ಒಂದು ಭಾಗವಷ್ಟೇ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪಾಕಿಸ್ತಾನ ಪರ ಮಾತನಾಡುವವರು ಹಲವರಿದ್ದಾರೆ. ಈ ಹಿಂದೆ ಕನ್ಹಯ್ಯ ಕುಮಾರ್‌ ಅವರು ಅಫ್ಜಲ್‌ ಗುರು ಪರ ಮಾತನಾಡಿದ್ದರು ಎಂದರು.

ಕೆಲವು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಮೇಲೆ ನಿಗಾ ಇಡಲಾಗಿದೆ. ಕೆಲವನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗದ ಕೆಲವು ಸಂಘಟನೆಗಳು ಅನ್ಯ ಮಾರ್ಗ ಹಿಡಿಯುತ್ತಿವೆ. ಅದನ್ನು ನಿಯಂತ್ರಿಸಲಾಗುವುದು ಎಂದು ಹೇಳಿದರು.

ADVERTISEMENT

ಕಠಿಣ ಕ್ರಮ– ಶೆಟ್ಟರ್: ಇಲ್ಲಿಯ ಅನ್ನ ಉಂಡು ದೇಶದ್ರೋಹದ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ದೇಶವಿರೋಧಿ ಘೋಷಣೆ ಕೂಗಿದ ವರನ್ನು ರಾಜ್ಯ ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್ ಇಲ್ಲಿ ಭಾನುವಾರ ಎಚ್ಚರಿಸಿದರು.

‘ಅಂತರರಾಷ್ಟ್ರೀಯ ಹುನ್ನಾರ’

(ಮಂಡ್ಯ ವರದಿ): ‘ರಾಷ್ಟ್ರವಿರೋಧಿ ಘೋಷಣೆಗಳ ಹಿಂದೆ ಅಂತರರಾಷ್ಟ್ರೀಯ ಹುನ್ನಾರವಿದೆ. ಭಾರತೀಯ ಪ್ರಜೆಗಳನ್ನೇ ಬಳಸಿಕೊಂಡು ದೇಶವನ್ನು ದುರ್ಬಲ ಗೊಳಿಸುವ ಯತ್ನ ಜಾಗೃತವಾಗಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ ಕುಮಾರ್‌ ಆರೋಪಿಸಿದರು.

ಸಾತನೂರು ಗ್ರಾಮದಲ್ಲಿ ಭಾನು ವಾರ ‘ಕಾವೇರಿ ಡಿಬೇಟ್‌; ರಾಷ್ಟ್ರೀಯ ವಾದಿಗಳ ರಾಜ್ಯಮಟ್ಟದ ಸಮ್ಮಿಲನ’ ಸಮಾರಂಭದಲ್ಲಿ ಮಾತನಾಡಿದರು.

‘ಜೆಎನ್‌ಯು, ಬೆಂಗಳೂರಿನ ಕಾಲೇಜಿ ನಲ್ಲಿ ನಡೆದ ರಾಷ್ಟ್ರವಿರೋಧಿ ಹೇಳಿಕೆ, ಕೊಪ್ಪದ ವಿದ್ಯಾರ್ಥಿನಿಯ ಘೋಷಣೆ ಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡಬಾರದು. ಭ್ರಮಾಲೋಕದಲ್ಲಿರುವ ಬುದ್ಧಿಜೀವಿಗಳ ಷಡ್ಯಂತ್ರದಿಂದ ಇಂತಹ ಘೋಷಣೆಗಳು ಕೇಳಿಬರುತ್ತಿವೆ’ ಎಂದರು.

‘ಕೇಂದ್ರ ಗಂಭೀರವಾಗಿ ಪರಿಗಣಿಸಿದೆ’

ಮಡಿಕೇರಿ: ‘ದೇಶ ವಿರೋಧಿ ಘೋಷಣೆ ಕೂಗುವ ಪ್ರಕರಣಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವ ಸಂಘಟನೆಗಳನ್ನು ಮಟ್ಟ ಹಾಕುತ್ತೇವೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಲ್ಲಿ ಭಾನುವಾರ ಎಚ್ಚರಿಸಿದರು.

ಸಂಗಯ್ಯನಪುರದಲ್ಲಿ ಮಾತನಾಡಿ, ‘ಪ್ರತಿಭಟನೆಗಳನ್ನು ಕೆಲವರು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಘಟನೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ತನಿಖೆ ನಡೆಸಲಿವೆ’ ಎಂದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಕೊಳೆಗೇರಿ ಕಾಣದಂತೆ ಗೋಡೆ ಕಟ್ಟಿ ವಾಸ್ತವ ಮರೆ ಮಾಚಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ರಾಷ್ಟ್ರದ ಘನತೆಯನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಿದೆ. ಸಣ್ಣಪುಟ್ಟ ಕೆಲಸಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಇದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

‘ಆಕೆಗೆ ಮಾತು ಪೂರ್ಣಗೊಳಿಸಲು ಅವಕಾಶ ನೀಡಬೇಕಿತ್ತು’

ಬೆಂಗಳೂರು: ‘ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋ ಪರ ನಿಲ್ಲುವ ಪ್ರಶ್ನೆಯೇ ಇಲ್ಲ. ಆದರೆ ಆಕೆ ಏನು ಹೇಳುತ್ತಿದ್ದಳು ಎಂಬುದನ್ನು ಕೇಳಬೇಕಿತ್ತು. ಮಾತು ಮುಗಿಸುವ ಮುನ್ನವೇ ತಡೆಯಬಾರದಿತ್ತು’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಅಮೂಲ್ಯ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿದ್ದನ್ನು ನೋಡಿದ್ದೇನೆ. ಈಗಲೂ ಆತುರಪಡುವುದು ಬೇಡ’ ಎಂದು ಸಲಹೆ ಮಾಡಿದರು.

‘ಪ್ರಚೋದನೆ ಹಿಂದೆ ಸಂಘಟನೆಗಳು’

ಸಿಂಧನೂರು (ರಾಯಚೂರು ಜಿಲ್ಲೆ): ‘ಕೆಲ ವಿಚ್ಛಿದ್ರಕಾರಿ ಶಕ್ತಿಗಳು ದೇಶದಲ್ಲಿ ಇದ್ದುಕೊಂಡೇ ದೇಶದ್ರೋಹ ಎಸಗುತ್ತಿವೆ. ವಿದ್ಯಾರ್ಥಿನಿ ಅಮೂಲ್ಯಾ ಪ್ರಚೋದಿತ ಮಾತಿನ ಹಿಂದೆ ಕೆಲ ಸಂಘಟನೆಗಳಿದ್ದು, ಈ ಬಗ್ಗೆ
ತನಿಖೆ ನಡೆಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶದ್ರೋಹದ ಚಟುವಟಿಕೆ. ಇದರಲ್ಲಿ ತೊಡಗಿರುವ ಮತ್ತು ಪ್ರಚೋದಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.