ADVERTISEMENT

ಅರ್ಥಧಾರಿ, ಪ್ರಸಂಗಕರ್ತರಾಗಿ ಖ್ಯಾತಿ: ನೆನಪಿನಂಗಳಕ್ಕೆ ಜಾರಿದ ಪ್ರೊ. ಎಂ.ಎ.ಹೆಗಡೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 6:01 IST
Last Updated 18 ಏಪ್ರಿಲ್ 2021, 6:01 IST
ಪ್ರೊ. ಎಂ.ಎ.ಹೆಗಡೆ (ಪ್ರಜಾವಾಣಿ ಸಂಗ್ರಹ ಚಿತ್ರ)
ಪ್ರೊ. ಎಂ.ಎ.ಹೆಗಡೆ (ಪ್ರಜಾವಾಣಿ ಸಂಗ್ರಹ ಚಿತ್ರ)   

ಶಿರಸಿ: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಖ್ಯಾತ ವಾಗ್ಮಿ, ತಾಳಮದ್ದಲೆ ಅರ್ಥಧಾರಿ ಮಹಾಬಲೇಶ್ವರ ಎ.ಹೆಗಡೆ ದಂಟ್ಕಲ್ (ಎಂ.ಎ.ಹೆಗಡೆ) ನಿಧನರಾಗಿದ್ದು, ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಹೆಸರಿಗೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲಿ ‘ಮಹಾಬಲ’ನಾಗಿ ಮೆರೆದ ಅವರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದೊಡ್ಡಿದೆ.

ಸಿದ್ದಾಪುರ ತಾಲ್ಲೂಕಿನ ಜೋಗಿನಮನೆ ಮೂಲದವರಾಗಿದ್ದ ಅವರು ಶಿರಸಿ ತಾಲ್ಲೂಕಿನ ದಂಟ್ಕಲ್‌ನಲ್ಲಿ ನೆಲೆಸಿದ್ದರು. ಉಪನ್ಯಾಸಕರಾಗಿ ಮೂರೂವರೆ ದಶಕಗಳ ಕಾಲ ಸಿದ್ದಾಪುರ, ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಕಳೆದ ಅವಧಿಯಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಮತ್ತೊಂದು ಅವಧಿಗೆ ಮುಂದುವರಿದಿದ್ದರು. ಇಳಿ ವಯಸ್ಸಿನಲ್ಲೂ ಯಕ್ಷಗಾನ, ತಾಳಮದ್ದಲೆ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡ ಹೆಗ್ಗಳಿಕೆ ಅವರ ಪಾಲಿಗಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿ, ಅರ್ಥಧಾರಿ, ಪ್ರಸಂಗಕರ್ತ, ಸಂಶೋಧಕ, ಚಿಂತಕರಾಗಿ ಅವರು ಹೆಸರು ಮಾಡಿದ್ದರು. ‘ಸೀತಾ ವಿಯೋಗ’, ‘ರಾಜಾಕರಂಧಮ’, ‘ವಿಜಯೀ ವಿಶ್ರುತ’, ‘ಧರ್ಮ ದುರಂತ’ ಸೇರಿ ಇಪ್ಪತ್ತಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ರಚಿಸಿದ್ದಾರೆ.

ಯಕ್ಷಗಾನದ ಮೊದಲ ಕೃತಿ ‘ಆದಿಪರ್ವ’ ಸಂಪಾದಿಸಿದ್ದರು. ಅನೇಕ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರಕಟಿಸಲು ಕಾರಣರಾಗಿದ್ದಾರೆ.

ಕಲೆಯ ಬಗೆಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧಕಾರರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಶಿರಸಿಯಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಸಂಘಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದಾರೆ.

'ಬ್ರಹ್ಮಸೂತ್ರ ಚತುಃಸೂತ್ರಿ', 'ಅಲಂಕಾರತತ್ವ', 'ಭಾರತೀಯ ತತ್ವಶಾಸ್ತ್ರ ಪ್ರವೇಶ', 'ಕುಮಾರಿಲಭಟ್ಟ', 'ಶಬ್ದ ಮತ್ತು ಜಗತ್ತು', 'ಸೌಂದರ್ಯ ಲಹರಿ ಮತ್ತು ಸಮಾಜ', 'ಹಿಂದೂ ಸಂಸ್ಕಾರಗಳು', 'ಕೆರೆಮನೆ ಶಂಭು ಹೆಗಡೆ', 'ಮರೆಯಲಾಗದ ಮಹಾಬಲ' ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. 'ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಸಾಹಿತ್ಯ ಚರಿತ್ರೆ' ಕೃತಿ ಮುದ್ರಣ ಹಂತದಲ್ಲಿದೆ.

ಯಕ್ಷಗಾನ ಸೇವೆಗಾಗಿ ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ ಮುಂತಾದವು ಸಂದಿವೆ. ಇವರ ಸಿದ್ಧಾಂತಬಿಂದು ಗ್ರಂಥಕ್ಕೆ ಪ್ರೊ.ಎಂ. ಹಿರಿಯಣ್ಣ ಪುರಸ್ಕಾರ, ಭಾರತೀಯ ದರ್ಶನಗಳು ಮತ್ತು ಭಾಷೆ ಎಂಬ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.