ಪ್ರವಾಸೋದ್ಯಮ – ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಭಾರತದಿಂದ 2024ರಲ್ಲಿ 10 ಲಕ್ಷ ಮಂದಿ ಮಲೇಷ್ಯಾಗೆ ಪ್ರವಾಸ ಬಂದಿದ್ದರು. ಇದರಲ್ಲಿ ದಕ್ಷಿಣ ಭಾರತೀಯರ ಸಂಖ್ಯೆಯೇ ಹೆಚ್ಚು. ಕರ್ನಾಟಕದಿಂದಲೂ ಲಕ್ಷಾಂತರ ಮಂದಿ ಭೇಟಿ ನೀಡಿದ್ದಾರೆ. ಹೀಗಾಗಿ ಇಲ್ಲೂ ಮಾಹಿತಿ ಕೇಂದ್ರ ಆರಂಭಿಸುವ ಪ್ರಸ್ತಾವ ಇದೆ’ ಎಂದು ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ಡಾಟುಕ್ ಮನೋಹರನ್ ಪೆರಿಯಸಾಮಿ ಹೇಳಿದರು.
ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ವಿಸಿಟ್ ಮಲೇಷ್ಯಾ2026’ ಶೃಂಗದಲ್ಲಿ ಅವರು ಮಾತನಾಡಿದರು. ಭಾರತ ಮತ್ತು ಮಲೇಷ್ಯಾದ ಪ್ರವಾಸಿ ಸೇವಾ ಸಂಸ್ಥೆಗಳು, ಪ್ರವಾಸಿ ರಾಯಭಾರಿಗಳು ಶೃಂಗದಲ್ಲಿ ಭಾಗಿಯಾಗಿದ್ದರು.
‘ಬೆಂಗಳೂರು ಮತ್ತು ಕೊಚ್ಚಿಯಿಂದ ಮಲೇಷ್ಯಾದ ವಿವಿಧೆಡೆಗೆ ಪ್ರತಿದಿನ ನೇರ ವಿಮಾನಸೇವೆ ಆರಂಭವಾಗಿದೆ. ಜತೆಗೆ ಭಾರತೀಯರ ಪ್ರವಾಸಿಗರಿಗೆ ವೀಸಾ ವಿನಾಯತಿ ನೀಡಲಾಗಿದೆ. ಹೀಗಾಗಿಯೇ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. 2025ರಲ್ಲಿ 15 ಲಕ್ಷ ಭಾರತೀಯರು ನಮ್ಮಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದರು.
ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಯ ಚೆನ್ನೈ ನಿರ್ದೇಶಕ ಹಿಷಾಮುದ್ದೀನ್ ಮುಸ್ತಫಾ, ‘ದಕ್ಷಿಣ ಭಾರತದ ಪ್ರವಾಸಿಗರನ್ನು ಗಮನದಲ್ಲಿ ಇರಿಸಿಕೊಂಡೇ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.