ADVERTISEMENT

ಹಿಂದಿ ದಿವಸದ ವಿರುದ್ಧ ಮೊಳಗಿದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 20:41 IST
Last Updated 14 ಸೆಪ್ಟೆಂಬರ್ 2021, 20:41 IST
ಮೈಸೂರು ಬ್ಯಾಂಕ್ ವೃತ್ತದಲ್ಲಿ ಶಿವರಾಮೇಗೌಡ ಬಣದ ಕಾರ್ಯಕರ್ತರಿಂದ ಫಲಕಕ್ಕೆ ಬೆಂಕಿ ಹಚ್ಚಿರುವುದು –ಪ್ರಜಾವಾಣಿ ಚಿತ್ರಗಳು
ಮೈಸೂರು ಬ್ಯಾಂಕ್ ವೃತ್ತದಲ್ಲಿ ಶಿವರಾಮೇಗೌಡ ಬಣದ ಕಾರ್ಯಕರ್ತರಿಂದ ಫಲಕಕ್ಕೆ ಬೆಂಕಿ ಹಚ್ಚಿರುವುದು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಹಿಂದಿ ದಿವಸ ವಿರೋಧಿಸಿ ರಾಜ್ಯದಾದ್ಯಂತ ಆಕ್ರೋಶ ಮೊಳಗಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಲ್ಲಿ ಕೆಲವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರೆ, ಹಲವರು ಸರಣಿ ಟ್ವೀಟ್‌ ಮಾಡಲು ಮೂಲಕ ತಮ್ಮ ಸಿಟ್ಟು ಹೊರ ಹಾಕಿದರು.

ರಾಷ್ಟ್ರೀಕೃತ, ಗ್ರಾಮೀಣ ಮತ್ತು ಖಾಸಗಿ ಬ್ಯಾಂಕ್‌ಗಳ ಮುಂದೆ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದವು. ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಕರವೇ ಕಾರ್ಯಕರ್ತರು ಪ್ರತಿಭಟನೆ ದಾಖಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಮತ್ತು ಎಚ್. ಶಿವರಾಮೇಗೌಡ ಬಣದಿಂದ ಪ್ರತ್ಯೇಕ ಪ್ರತಿಭಟನೆಗಳು ನಡೆದವು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಶಿವರಾಮೇಗೌಡ ಬಣದ ಕಾರ್ಯಕರ್ತರು ಹಿಂದಿ ಫಲಕಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಗೌಡ ಬಣದ ಕಾರ್ಯಕರ್ತರು ಬ್ಯಾಂಕ್‌ಗಳ ಮುಂದೆ ನೆರೆದು ಹಿಂದಿ ದಿವಸ ಆಚರಣೆ ವಿರುದ್ಧ ಘೋಷಣೆ ಕೂಗಿದರು. ಹಲವೆಡೆ ಪಾದಯಾತ್ರೆ, ಬೈಕ್ ರ್‍ಯಾಲಿಗಳನ್ನು ನಡೆಸಿದರು. ಹಿಂದಿ ಫಲಕಗಳಿಗೆ ಮಸಿ ಬಳಿದು ಅಸಮಾಧಾನ ಹೊರ ಹಾಕಿದರು. ಶಾಸಕರು, ಸಂಸದರ ಕಚೇರಿಗಳಿಗೂ ಮನವಿ ಸಲ್ಲಿಸಿದರು.

ADVERTISEMENT

‘ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಕನ್ನಡದಲ್ಲೇ ವ್ಯವಹಾರಗಳು ನಡೆಯಬೇಕು. ಬ್ಯಾಂಕಿನಲ್ಲಿ ಬಳಕೆಯಾಗುವ ಚಲನ್, ಚೆಕ್ ಪುಸ್ತಕ, ಪಾಸ್ ಪುಸ್ತಕಗಳಲ್ಲಿ ಕನ್ನಡ ಬಳಕೆಯಾಗಬೇಕು. ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಇರಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು’ ಎಂದು ಒತ್ತಾಯಿಸಿ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.

ಹೋರಾಟದ ಕುರಿತು ಟ್ವೀಟ್ ಮಾಡಿರುವ ಟಿ.ಎ.ನಾರಾಯಣಗೌಡ, ‘ಹಿಂದಿ ದಿವಸ ಎಂಬುದು ದೇಶದ ಹಿಂದಿಯೇತರ ಜನರ ಮೇಲೆ ನಡೆಸುವ ದೌರ್ಜನ್ಯ, ಭಾಷಾ ಸಮುದಾಯಗಳನ್ನು ವಂಚಿಸುವ ಹುನ್ನಾರ. ಹಿಂದಿ ದಿವಸ ಎಂಬ ಆಚರಣೆ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅನೈತಿಕ. ಭಾರತ ಒಕ್ಕೂಟದಲ್ಲಿ ನಾವು ಯಾರ ಅಡಿಯಾಳೂ ಅಲ್ಲ. ಭಾರತ ಒಕ್ಕೂಟದಲ್ಲಿ ಪ್ರಥಮ ದರ್ಜೆ ಪ್ರಜೆಗಳು, ಎರಡನೇ ದರ್ಜೆ ಪ್ರಜೆಗಳು ಎಂಬ ಎರಡು ವಿಭಾಗ ಇರಲು ಸಾಧ್ಯವಿಲ್ಲ. ಇದು ಒಕ್ಕೂಟ ತತ್ವಕ್ಕೆ ಮಾರಕ. ಇದು ನಿಲ್ಲಲೇಬೇಕು’ ಎಂದು ಆಗ್ರಹಿಸಿದ್ದಾರೆ.

ಟ್ವೀಟ್‌ಗಳ ಸುರಿಮಳೆ

ಹಿಂದಿ ದಿವಸ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡಿಗರು ಟ್ವೀಟ್‌ಗಳ ಸುರಿಮಳೆ ಸುರಿಸಿದ್ದಾರೆ.

‘#StopHindiImposition’ ಮತ್ತು ‘#ಹಿಂದಿಹೇರಿಕೆನಿಲ್ಲಿಸಿ’ ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 10ರ ತನಕ ಟ್ವಿಟರ್ ಆಂದೋಲನಕ್ಕೆ ಟಿ.ಎ.ನಾರಾಯಣಗೌಡ ಕರೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು.

ಕಪ್ಪು ಬಾವುಟ ಪ್ರದರ್ಶಿಸಿದ ವಾಟಾಳ್ ನಾಗರಾಜ್

ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‍ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.

‘ನಾವು ಹಿಂದಿಯ ಗುಲಾಮರಲ್ಲ. ಕನ್ನಡ ದಿನವನ್ನು ಕೇಂದ್ರ ಸರ್ಕಾರವೇ ಆಚರಣೆ ಮಾಡಬೇಕು. ದೆಹಲಿ ದರ್ಬಾರ್‌ಗೆ ನಾವು ಒಪ್ಪುವುದಿಲ್ಲ. ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಚಳವಳಿ ಮಾಡುತ್ತೇವೆ’ ಎಂದು ವಾಟಾಳ್ ನಾಗರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.