ADVERTISEMENT

ಬೆಂಗಳೂರು: ನರೇಗಾ ಮರು ಜಾರಿಗೆ ಒತ್ತಾಯಿಸಿ ಹೋರಾಟಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 15:57 IST
Last Updated 17 ಜನವರಿ 2026, 15:57 IST
‘ಉದ್ಯೋಗ ಖಾತರಿ ಧ್ವಂಸದ ವಿಬಿ ಜಿ ರಾಮ್‌ ಜಿ ಕಾನೂನಿನ ಅಪಾಯ ಮತ್ತು ಮುನ್ನೆಚ್ಚರಿಕೆ’ ವಿಚಾರಸಂಕಿರಣದಲ್ಲಿ ಕೆ.ಪಿ.ಸುರೇಶ್‌, ಟಿ.ಎನ್.ಪ್ರಕಾಶ ಕಮ್ಮರಡಿ, ಎಸ್.ಜಿ. ಸಿದ್ಧರಾಮಯ್ಯ, ದೇವಿ, ಶಾರದಾ ಗೋಪಾಲ್ ಭಾಗಿಯಾಗಿದ್ದರು –ಪ್ರಜಾವಾಣಿ ಚಿತ್ರ
‘ಉದ್ಯೋಗ ಖಾತರಿ ಧ್ವಂಸದ ವಿಬಿ ಜಿ ರಾಮ್‌ ಜಿ ಕಾನೂನಿನ ಅಪಾಯ ಮತ್ತು ಮುನ್ನೆಚ್ಚರಿಕೆ’ ವಿಚಾರಸಂಕಿರಣದಲ್ಲಿ ಕೆ.ಪಿ.ಸುರೇಶ್‌, ಟಿ.ಎನ್.ಪ್ರಕಾಶ ಕಮ್ಮರಡಿ, ಎಸ್.ಜಿ. ಸಿದ್ಧರಾಮಯ್ಯ, ದೇವಿ, ಶಾರದಾ ಗೋಪಾಲ್ ಭಾಗಿಯಾಗಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ರದ್ದುಪಡಿಸುವ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮ ಮಟ್ಟದಿಂದ ಸಂಸತ್ತಿನವರೆಗೂ ಹೋರಾಟ ನಡೆಸಬೇಕು ಎಂಬ ನಿರ್ಣಯವನ್ನು ‘ಮನರೇಗಾ ರಕ್ಷಣಾ ಒಕ್ಕೂಟ–ಕರ್ನಾಟಕ’ವು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ತೆಗೆದುಕೊಳ್ಳಲಾಯಿತು.

ಒಕ್ಕೂಟವು ನಗರದಲ್ಲಿ ಶನಿವಾರ ‘ಉದ್ಯೋಗ ಖಾತರಿ ಧ್ವಂಸದ ವಿಬಿ ಜಿ ರಾಮ್ ಜಿ ಕಾನೂನಿನ‌ ಅಪಾಯಗಳು ಮತ್ತು ಮುನ್ನೆಚ್ಚರಿಕೆ’ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ನರೇಗಾವನ್ನು ರದ್ದುಪಡಿಸಿ ಕೇಂದ್ರ ಸರ್ಕಾರವು ತರಲು ಹೊರಟಿರುವ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌–ಗ್ರಾಮೀಣ (ವಿಬಿ–ಜಿ ರಾಮ್‌ ಜಿ) ಯೋಜನೆಯು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ ಎಂಬ ಆತಂಕ ವಿಚಾರಗೋಷ್ಠಿಯಲ್ಲಿ ವ್ಯಕ್ತವಾಯಿತು.

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ, ‘ಕೇಂದ್ರದಲ್ಲಿ ಅತ್ಯಂತ ಕೆಟ್ಟ ಪಕ್ಷ ಅಧಿಕಾರದಲ್ಲಿದ್ದು, ಅಷ್ಟೇ ಕೆಟ್ಟ ಆಡಳಿತ ನೀಡುತ್ತಿದೆ. ಅದರಲ್ಲಿ ಎಷ್ಟು ಕೆಡುಕು ತುಂಬಿದೆ ಎಂಬುದಕ್ಕೆ ವಿಬಿ–ಜಿ ರಾಮ್‌ ಜಿ ಯೋಜನೆಯೇ ಸಾಕ್ಷಿ. ಈ ಕೆಡುಕಿನ ವಿರುದ್ಧ ನಾವೆಲ್ಲರೂ ಹೋರಾಡಬೇಕು’ ಎಂದು ಕರೆ ನೀಡಿದರು.

ADVERTISEMENT

ಕೃಷಿ ತಜ್ಞ ಕೆ.ಪಿ.ಸುರೇಶ ವಿಷಯವನ್ನು ಪ್ರಸ್ತಾಪಿಸಿ, ‘ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರನ್ನಷ್ಟೇ ಬದಲಿಸಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಇದು, ಜನರ ಹಕ್ಕು ಮತ್ತು ರಾಜ್ಯಗಳ ಅಧಿಕಾರ ಕಸಿದುಕೊಳ್ಳುವ ಹುನ್ನಾರ ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

‘ನರೇಗಾ ಅಡಿ ಬೇಡಿಕೆ ಇದ್ದಷ್ಟು ಉದ್ಯೋಗ ನೀಡಲಾಗುತ್ತಿತ್ತು. ಹೊಸ ಯೋಜನೆ ಅಡಿಯಲ್ಲಿ ಎಷ್ಟು ಉದ್ಯೋಗ ನೀಡಬೇಕು ಎಂಬುದನ್ನು ಕೇಂದ್ರವೇ ನಿರ್ಧರಿಸಲಿದೆ. ನರೇಗಾ ಅಡಿ ನಡೆಸುವ ಕಾಮಗಾರಿ, ಜನರಿಗೆ ನೀಡುವ ಉದ್ಯೋಗಗಳನ್ನು ಗ್ರಾಮ ಪಂಚಾಯತಿಗಳ ಮೂಲಕ ರಾಜ್ಯ ಸರ್ಕಾರ ನಿರ್ಧರಿಸುತ್ತಿತ್ತು. ಆ ಅಧಿಕಾರವನ್ನು ಈಗ ಕೇಂದ್ರವು ಕಿತ್ತುಕೊಳ್ಳಲಿದೆ’ ಎಂದು ವಿವರಿಸಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ, ‘ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷಗಳು ಈ ಹೋರಾಟವನ್ನು ದಡಮುಟ್ಟಿಸುತ್ತವೆ ಎಂದು ಕುಳಿತರೆ ಸಾಕಾಗುವುದಿಲ್ಲ. ಜನರೇ ಹೋರಾಟಕ್ಕೆ ಇಳಿದರೆ, ಕೇಂದ್ರ ಸರ್ಕಾರವನ್ನು ಮಣಿಸಲು ಸಾಧ್ಯವಾಗುತ್ತದೆ’ ಎಂದರು.

ವಿಚಾರಗೋಷ್ಠಿಯಲ್ಲಿ ವ್ಯಕ್ತವಾದ ವಿಷಯಗಳನ್ನು ಒಗ್ಗೂಡಿಸಿ, ಹೋರಾಟದ ಸಂಬಂಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಪ್ರಮುಖ ನಿರ್ಣಯಗಳು

  • ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ ಈ ವಿಷಯ ಚರ್ಚಿಸಬೇಕು. ವಿಬಿ ಜಿ ರಾಮ್‌–ಜಿ ಕಾನೂನನ್ನು ತಿರಸ್ಕರಿಸುವ ನಿರ್ಣಯವನ್ನು ಜ.26ರಂದು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಅಂಗೀಕರಿಸಬೇಕು

  • ಎಲ್ಲ ಗ್ರಾಮಗಳ ಮನೆ–ಮನೆಗೂ ಹೋಗಿ ಕೇಂದ್ರ ಸರ್ಕಾರದ ಈ ನೀತಿಯ ಅಪಾಯಗಳನ್ನು ಜನರಿಗೆ ವಿವರಿಸಬೇಕು. 

  • ಜ 30ರ ಹುತಾತ್ಮರ ದಿನದಂದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಬೇಕು. ಈ ಕಾನೂನನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿ ಪ್ರಧಾನಿರಿಗೆ ಪತ್ರ ರವಾನಿಸಬೇಕು

  • ಜ.22ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಗೆ ಮನರೇಗಾ ರಕ್ಷಣಾ ಒಕ್ಕೂಟದ ಪ್ರತಿನಿಧಿಗಳು ಭಾಗಿಯಾಗಬೇಕು

  • ಇದೇ 21ರಂದು ಬೆಂಗಳೂರಿನ ಪುರಭವನದ ಎದುರು ನಡೆಯಲಿರುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. 

  • ಫೆಬ್ರುವರಿ 20ರಂದು ನರೇಗಾ ಯೋಜನೆಗೆ 20 ವರ್ಷ ತುಂಬಲಿದ್ದು ಆ ದಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಹಾ ಪಂಚಾಯತಿ ನಡೆಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.