ADVERTISEMENT

ಕಬ್ಬು ಬೆಳೆಗಾರರ ಸಮಸ್ಯೆ: ಬೆಳಗಾವಿಯಲ್ಲಿ ಡಿ.9 ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 10:12 IST
Last Updated 1 ಡಿಸೆಂಬರ್ 2018, 10:12 IST

ಹುಬ್ಬಳ್ಳಿ:ಕಬ್ಬು ಬೆಳೆಗಾರರ ವಿವಿಧ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಡಿ.9 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ ಹೇಳಿದರು.

ಸಮಸ್ಯೆ ಪರಿಹರಿಸದಿದ್ದರೆ, ಸುವರ್ಣಸೌಧ ಅಧಿವೇಶನ ಆರಂಭವಾಗುವ ಡಿ.10 ರಂದು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಹೋರಾಟದ ಸ್ವರೂಪವನ್ನು ಡಿ.9 ರಂದೇ ಪ್ರಕಟಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ₹ 629 ಕೋಟಿ ಬಾಕಿ ಉಳಿಸಿಕೊಂಡಿವೆ. ಬಾಕಿಯನ್ನು ಬೆಳಗಾವಿ ಅಧಿವೇಶನಕ್ಕೆ ಮುನ್ನ ಕೊಡಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ. ಭರವಸೆ ಈಡೇರಿಸಬೇಕು. ಈ ಬಗ್ಗೆ ಕೂಡಲೇ ಹೋರಾಟಗಾರರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಸಾಗಾಣೆ, ಕೂಲಿ ವೆಚ್ಚವನ್ನು ಕಾರ್ಖಾನೆಗಳೇ ವಹಿಸಿಕೊಳ್ಳಬೇಕು. ಎಫ್‌ಆರ್‌ಪಿ (ನ್ಯಾಯುಯತ ಬೆಲೆ) ಎಕ್ಸ್‌ ಫೀಲ್ಡ್‌ ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ ಇಳುವರಿ ಪ್ರಮಾಣವನ್ನು 9.5 ರಿಂದ 10ಕ್ಕೆ ಹೆಚ್ಚಿಸಿ ಪ್ರತಿ ಟನ್‌ ಕಬ್ಬಿಗೆ ₹ 2750 ದರ ಘೋಷಿಸಿದೆ. ಇದರಿಂದ ರೈತರಿಷ್ಟ ನಷ್ಟವಾಗುತ್ತಿದೆ. ಬಿಜೆಪಿ ಸಂಸದರು ಈ ಅನ್ಯಾಯವನ್ನು ಸರಿಪಡಿಸಿ ಹೋರಾಟಕ್ಕೆ ಬರಬೇಕು ಎಂದರು.

14 ದಿನದಲ್ಲಿ ಕಬ್ಬು ಬಿಲ್‌ ಪಾವತಿಸಿದಿದ್ದರೆ ಜೈಲು ಶಿಕ್ಷೆ ವಿಧಿಸುವ ರಾಜ್ಯ ಕಬ್ಬು ನಿಯಂತ್ರಣಾ ಕಾಯ್ದೆ (ಎಸ್‌ಎಪಿ)ಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ರದ್ದು ಪಡಿಸಿದ್ದಾರೆ. ಕಾಯ್ದೆಯನ್ನು ಮತ್ತೆ ಜಾರಿಗೆ ತರುವುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮುಂಬರುವ ಅಧಿವೇಶನದಲ್ಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರವು ಎಫ್‌ಆರ್‌ಪಿ ಕಾಯ್ದೆಗೆ ತಿದ್ದುಪಡಿ ತಂದು ಬಾಕಿ ಪಾವತಿಸಿದ ಕಾರ್ಖಾನೆಗಳವರಿಗೆ ಶಿಕ್ಷೆಗೆ ಅವಕಾಶ ಒದಗಿಸಬೇಕು. ತಮಿಳುನಾಡಿನಲ್ಲಿ ಕಾರ್ಖಾನೆಯವರೇ ಸಾಗಾಣೆ ವೆಚ್ಚ ಭರಿಸಿ ಎಫ್‌ಆರ್‌ಪಿಗಿಂತ ಪ್ರತಿ ಕ್ವಿಂಟಲ್‌ಗೆ ₹200 ಹೆಚ್ಚು ಕೊಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರತಿ ಕ್ವಿಂಟಲ್‌ಗೆ 3,250 ಘೋಷಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.