ADVERTISEMENT

ಸುಳ್ಳು ಪ್ರಮಾಣ ಪತ್ರ: ಶಾಸಕ ರೇಣುಕಾಚಾರ್ಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 13:09 IST
Last Updated 4 ಏಪ್ರಿಲ್ 2022, 13:09 IST
ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಪ್ರಮಾಣ ಪತ್ರ ಪಡೆದಿರುವ ಅವರ ಕುಟುಂಬ ಸದಸ್ಯರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ದಸಂಸ ಸದಸ್ಯರು ಪ್ರತಿಭಟನೆ ನಡೆಸಿದರು
ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಪ್ರಮಾಣ ಪತ್ರ ಪಡೆದಿರುವ ಅವರ ಕುಟುಂಬ ಸದಸ್ಯರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ದಸಂಸ ಸದಸ್ಯರು ಪ್ರತಿಭಟನೆ ನಡೆಸಿದರು   

ಮಂಡ್ಯ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಕುಟುಂಬ ಸದಸ್ಯರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿ ಅಪರಾಧ ಎಸಗಿದ್ದಾರೆ. ಪೊಲೀಸರು ಕೂಡಲೇ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಬಂಧಿಸಬೇಕು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಮೀಸಲಾತಿ ನೀತಿಯನ್ನು ವಿರೋಧಿಸುತ್ತಲೇ ಬಂದಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಲಿಂಗಾಯತ ಸಮಾಜಕ್ಕೆ ಸೇರಿದ ಶಾಸಕ ರೇಣುಕಾಚಾರ್ಯ ಅವರು ತಮ್ಮ ಪುತ್ರಿ, ಸಹೋದರರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸುಳ್ಳು ಪ್ರಮಾಣ ಪತ್ರ ಕೊಡಿಸಿರುವ ರೇಣುಕಾಚಾರ್ಯರ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಸಭಾಧ್ಯಕ್ಷರು ಅವರ ರಾಜೀನಾಮೆ ಪಡೆಯಬೇಕು ಅಥವಾ ಅವರ ಶಾಸಕ ಸ್ಥಾನವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ. ಹಿಂದೆ ಅಧಿಕಾರದಲ್ಲಿದ್ದ ರಾಮಕೃಷ್ಣ ಹೆಗಡೆ ಹಾಗೂ ಎಸ್‌.ಎಂ.ಕೃಷ್ಣ ಸರ್ಕಾರ ಕೂಡ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಸಾವಿರಾರು ಜನರಿಗೆ ಕ್ಷಮಾಧಾನ ನೀಡಿದ್ದರು. ಪರಿಶಿಷ್ಟರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಪ್ರಮಾಣ ಪತ್ರ ನೀಡಿ ಪಡೆದಿರುವ ಹುದ್ದೆಗಳನ್ನು ರದ್ದುಪಡಿಸಿ ಅವುಗಳನ್ನು ಅರ್ಹ ಪರಿಶಿಷ್ಟ ಸಮುದಾಯದ ಸದಸ್ಯರಿಗೆ ನೀಡಬೇಕು. ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ವೈಜ್ಞಾನಿಕ ನಿಯಮ ರೂಪಿಸಿ ಮೀಸಲಾತಿ ವಂಚನೆಯನ್ನು ತಡೆಯಬೇಕು. ಪ್ರಮಾಣ ಪತ್ರ ನೀಡುತ್ತಿರುವ ತಹಶೀಲ್ದಾರ್‌, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸುಳ್ಳು ಪ್ರಮಾಣ ಪತ್ರ ಪಡೆದ ರಾಜಕೀಯ ಮುಖಂಡರ ಸಂಬಂಧಿಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಅಂದಾನಿ ಸೋಮನಹಳ್ಳಿ, ಎಂ.ಶಿವು, ವೆಂಕಟೇಶ್‌ ಬೆಳ್ಳೂರು, ಡಿ.ಕೆ.ಅಂಕಯ್ಯ, ಮೂರ್ತಿ ಕಂಚನಕೋಟೆ, ಎಂ.ಎಚ್‌.ಗೀತಾ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.