ADVERTISEMENT

ಸಾಂತ್ವನ ಕೇಂದ್ರ ಉಳಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 2:28 IST
Last Updated 7 ಸೆಪ್ಟೆಂಬರ್ 2021, 2:28 IST
ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಾಂತ್ವನ ಕೇಂದ್ರದ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಾಂತ್ವನ ಕೇಂದ್ರದ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಉಳಿಸಿ’ ಆಂದೋಲನದ ಭಾಗವಾಗಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಾಂತ್ವನ ಕೇಂದ್ರದ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟ, ಸಾಧನಾ ರಾಷ್ಟ್ರೀಯ ಮಹಿಳಾ ಚಿಂತನಾ ವೇದಿಕೆ, ಗ್ಲೋಬಲ್ ಕನ್ಸರ್ನ್ ಇಂಡಿಯಾ, ಮಹಿಳಾ ಪರ ಸಂಘಟನೆಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದ ನೌಕರರು ಮತ್ತು ಪ್ರತಿನಿಧಿಗಳು, ಕೇಂದ್ರಗಳನ್ನು ಮುಚ್ಚುವ ಸರ್ಕಾರದ ನಿಲುವು ಖಂಡಿಸಿದರು.

‘ಮಹಿಳೆಯರ ಮೇಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿಯಂತ್ರಿಸಲು 2000–01ನೇ ಸಾಲಿನಲ್ಲಿ ರಾಜ್ಯದಾದ್ಯಂತ ಸಾಂತ್ವನ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾರಂಭಿಸಿತ್ತು. 2021ರ ಏಪ್ರಿಲ್‌ 1ರಿಂದ 71 ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

‘ಕೇಂದ್ರಗಳನ್ನು ಮುಂದುವರಿಸುವಂತೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈ ಕೇಂದ್ರಗಳನ್ನು ಮುಂದುವರಿಸುವಂತೆ ಅವರು ಸೂಚನೆ ನೀಡಿದ್ದರೂ, ಆರ್ಥಿಕ ಇಲಾಖೆ ಈವರೆಗೆ ಅನುಮೋದನೆ ನೀಡಿಲ್ಲ’ ಎಂದು ಅವರು ಆರೋಪಿಸಿದರು.

‘194 ಸಾಂತ್ವನ ಕೇಂದ್ರಗಳನ್ನು ಮುಂದುವರಿಸಲು ವರ್ಷಕ್ಕೆ ₹12 ಕೋಟಿ ಮಾತ್ರ ಅನುದಾನ ಅಗತ್ಯವಿದೆ. 5 ವರ್ಷಗಳ ಅಂಕಿ–ಅಂಶ ಗಮನಿಸಿದರೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈ ಯೋಜನೆ ಯಶಸ್ವಿಯಾಗಿ ಕಾರ್ಯಗತಗೊಂಡಿದೆ. ಮಹಿಳೆಯರ ಧ್ವನಿಯಾಗಿ ಈ ಕೇಂದ್ರಗಳು ಕೆಲಸ ಮಾಡಿದೆ. ಆದ್ದರಿಂದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಎಲ್ಲಾ ಸಾಂತ್ವನ ಕೇಂದ್ರಗಳನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.