ADVERTISEMENT

ಪ್ರಾಕ್ಸ್‌ಏರ್‌ನಿಂದ ₹210 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 14:36 IST
Last Updated 27 ನವೆಂಬರ್ 2025, 14:36 IST
<div class="paragraphs"><p> ಎಂ.ಬಿ.ಪಾಟೀಲ</p></div>

ಎಂ.ಬಿ.ಪಾಟೀಲ

   

ಬೆಂಗಳೂರು: ಕರ್ನಾಟಕದಲ್ಲಿ ದ್ರವ ಆಮ್ಲಜನಕ ಮತ್ತು ಸಾರಜನಕ ಉತ್ಪಾದನಾ ಘಟಕ ಆರಂಭಿಸಲು ಬ್ರಿಟನ್‌ನ ಪ್ರಾಕ್ಸ್‌ಏರ್‌ ಇಂಡಿಯಾ ಕಂಪನಿಯು ₹210 ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

ಬಂಡವಾಳ ಆಕರ್ಷಣೆಗಾಗಿ ಬ್ರಿಟನ್‌ ಪ್ರವಾಸದಲ್ಲಿ ಇರುವ ಎಂ.ಬಿ.ಪಾಟೀಲ ಅವರು ಪ್ರಾಕ್ಸ್‌ಏರ್‌ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದರು. ‘ಮೂರು ವರ್ಷಗಳ ಅವಧಿಯಲ್ಲಿ ಹಂತ–ಹಂತವಾಗಿ ₹210 ಕೋಟಿ ಹೂಡಿಕೆ ಮಾಡಲು ಕಂಪನಿಯು ಒಪ್ಪಿಕೊಂಡಿದೆ. ಈ ವರ್ಷದಿಂದಲೇ ಹೂಡಿಕೆ ಆರಂಭಿಸಲಿದೆ. ಘಟಕ ಆರಂಭಕ್ಕೆ ಅಗತ್ಯವಿರುವ ಎಲ್ಲ ಅನುಮತಿ, ಸವಲತ್ತು ಮತ್ತು ಭೂಮಿಯನ್ನು ತ್ವರಿತವಾಗಿ ಒದಗಿಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನರ್‌ ವಿಕ್ರಮ್‌ ದೊರೆಸ್ವಾಮಿ ಅವರನ್ನು ಭೇಟಿ ಮಾಡಿದ್ದ ಎಂ.ಬಿ.ಪಾಟೀಲರು, ಬೆಂಗಳೂರಿನ ಸಮೀಪ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕ್ವಿನ್‌ ಸಿಟಿಯಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಿದರು. ಕ್ವಿನ್‌ ಸಿಟಿಯಲ್ಲಿ ‘ಯುಕೆ ಟೆಕ್‌ ಸಿಟಿ’ ಸ್ಥಾಪಿಸಲು ಅವಕಾಶವಿದೆ ಎಂಬುದನ್ನು ಬ್ರಿಟನ್‌ನ ಉದ್ಯಮಿಗಳಿಗೆ ತಿಳಿಸಿ ಎಂದು ಕೋರಿದರು.

ಕೈಗಾರಿಕಾ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತೆ‌ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ‌ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಅವರು‌ ಸಚಿವರ ನೇತೃತ್ವದ ನಿಯೋಗದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.