ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ರುದ್ರಗೌಡ ಸಹಚರನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 20:56 IST
Last Updated 12 ಮೇ 2022, 20:56 IST
   

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಗುರುವಾರ, ಅಫಜಲಪುರದ ಶಿವಪ್ಪ ಆಲಮೇಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದರು.

‘ಬ್ಲೂಟೂತ್‌ ಬಳಸಿ ಅಕ್ರಮ ಎಸಗಿದ ಆರೋಪದಡಿ ಜೈಲು ಸೇರಿರುವ ರುದ್ರಗೌಡ ಡಿ.ಪಾಟೀಲ ಗುಂಪಿನಲ್ಲಿ ಶಿವಪ್ಪ ಕೂಡ ಇದ್ದ. ರುದ್ರಗೌಡ ಬಂಧನದ ಬಳಿಕ ಆತ ತಲೆಮರೆಸಿಕೊಂಡಿದ್ದ. ಶಿವಪ್ಪ ಕಡೆಯಿಂದ ಕೆಲ ಮಾಹಿತಿ ಪಡೆದು ಕಳುಹಿಸಲಾಗಿದೆ. ಅಗತ್ಯಬಿದ್ದರೆ ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಸಿಐಡಿ ಕಾರ್ಯಾಚರಣೆಯಿಂದ ಭಯಗೊಂಡಿರುವ ಕೆಲ ಅಭ್ಯರ್ಥಿಗಳು ಊರು ಬಿಟ್ಟು ತಲೆಮರೆಸಿಕೊಂಡಿದ್ದಾರೆ. ರುದ್ರಗೌಡ ಹಾಗೂ ಮಂಜುನಾಥ ಮೇಳಕುಂದಿ ಸಂಪರ್ಕದಲ್ಲಿದ್ದ ಕೆಲವರಿಗೆ ಹುಡುಕಾಟ ನಡೆದಿದೆ.

ADVERTISEMENT

ಇನ್ನೂ ಸಿಗದ ಶಾಂತಿಬಾಯಿ:ಹಗರಣ ಸಂಬಂಧ ಬೇಕಾಗಿರುವ ಅಭ್ಯರ್ಥಿ ಶಾಂತಿಬಾಯಿ ಮಾತ್ರ ಇನ್ನೂ ಸಿಕ್ಕಿಲ್ಲ. ಏ. 10ರಂದೇ ಶಾಂತಿಬಾಯಿ ಹಾಗೂ ಆಕೆಯ ಪತಿ ಬಸ್ಯನಾಯ್ಕ ತಲೆಮರೆಸಿಕೊಂಡಿದ್ದಾರೆ.

ನ್ಯಾಯಾಂಗ ಬಂಧನಕ್ಕೆ: ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಸಿಪಿಐ ಆನಂದ ಮೇತ್ರಿ ಅವರಸಿಐಡಿ ಕಸ್ಟಡಿ ಗುರುವಾರ (ಮೇ 12) ಅಂತ್ಯವಾದ ಕಾರಣ, ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು.ನ್ಯಾಯಾಲಯ ಇಬ್ಬರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಡಿವೈಎಸ್‌ಪಿ ವೈಜನಾಥ ಅಮಾನತು

ಕಲಬುರಗಿ: ಅಕ್ರಮ ಆರೋಪದಡಿ ಬಂಧಿತರಾಗಿದ್ದ ಇಲ್ಲಿನ 6ನೇ ಕೆಎಸ್‌ಆರ್‌ಪಿ ಬಟಾಲಿಯನ್‌ನ ಸಹಾಯಕ ಕಮಾಂಡೆಂಟ್(ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು ಅಮಾನತು ಮಾಡಲಾಗಿದೆ. ‘ವೈಜನಾಥ, ರುದ್ರಗೌಡಡಿ.ಪಾಟೀಲ ಜತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದು, ಹಲವು ಅಭ್ಯರ್ಥಿಗಳ ನೇಮಕಾತಿಗೆ ‘ಡೀಲ್’ ಕುದುರಿಸಿದ್ದರು’ ಎಂಬ ಆರೋಪವಿದೆ.

ಆರೋಪಿಗಳಿಂದ ಹಣ ಜಪ್ತಿ: ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಸಿಪಿಐ ಆನಂದ ಮೇತ್ರಿ ಅಕ್ರಮ ಎಸಗಲು ಪಡೆದಿದ್ದ ದೊಡ್ಡ ಮೊತ್ತದ ಹಣದಲ್ಲಿ, ಕೆಲವಷ್ಟನ್ನು ಅಧಿಕಾರಿಗಳು ಜಪ್ತಿ (ರಿಕವರಿ) ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಎಷ್ಟು ಮೊತ್ತ ಜಪ್ತಿ ಮಾಡಲಾಗಿದೆ ಎಂದು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.