ADVERTISEMENT

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಮೇಳಕುಂದಿ ಹಣಿಯಲು ದಾಳವಾದರೇ ಡಿವೈಎಸ್ಪಿ?

ಒಎಂಆರ್‌ ಶೀಟ್ ತಿದ್ದಿಸಿದ ಬಗ್ಗೆ ಅಧಿಕಾರಿಗೆ ಮಾಹಿತಿ ನೀಡಿದ್ದ ರುದ್ರಗೌಡ

​ಪ್ರಜಾವಾಣಿ ವಾರ್ತೆ
Published 7 ಮೇ 2022, 2:05 IST
Last Updated 7 ಮೇ 2022, 2:05 IST
ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಲಬುರಗಿಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಗೃಹಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು    –ಪ್ರಜಾವಾಣಿ ಚಿತ್ರ
ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಲಬುರಗಿಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಗೃಹಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು    –ಪ್ರಜಾವಾಣಿ ಚಿತ್ರ   

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ರುದ್ರಗೌಡ ಪಾಟೀಲ, ಅಭ್ಯರ್ಥಿಗಳ ನೇಮಕಾತಿ ಮಾಡಿಸುತ್ತಿದ್ದ ಮಂಜುನಾಥ ಮೇಳಕುಂದಿಯನ್ನು ಹಣಿಯಲು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ದಾಳವಾಗಿ ಉಪಯೋಗಿಸಿದ್ದರು ಎಂಬ ಸಂಗತಿ ಸಿಐಡಿ ವಿಚಾರಣೆ ವೇಳೆ ಹೊರಬಿದ್ದಿದೆ.

ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನುಎಂಟು ದಿನಗಳವರೆಗೆ ತಮ್ಮ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವ ಕೆಲಸದಲ್ಲಿ ಪಳಗಿದ್ದ ರುದ್ರಗೌಡ ಅವರಿಗೆ ಮಂಜುನಾಥ ಮೇಳಕುಂದಿ ಸಹ ಇದೇ ಕೃತ್ಯದಲ್ಲಿ ತೊಡಗಿರುವುದು ನುಂಗಲಾರದ ತುತ್ತಾಗಿತ್ತು. ಹೇಗಾದರೂ ಮಾಡಿ ಹಣಿಯಬೇಕು ಎಂಬ ಉದ್ದೇಶದಿಂದ ತಮಗೆ ಪರಿಚಯವಿರುವ ಜೇವರ್ಗಿ ತಾಲ್ಲೂಕಿನವರಾದ ಮಲ್ಲಿಕಾರ್ಜುನ ಸಾಲಿ ಅವರಿಗೆ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು.

ADVERTISEMENT

ಇದನ್ನು ಅನುಸರಿಸಿ ಮಂಜುನಾಥ ಹಾಗೂ ದಿವ್ಯಾ ಹಾಗರಗಿ ಅವರಿಗೆ ಕರೆ ಮಾಡಿದ್ದ ಸಾಲಿ, ‘ಪರೀಕ್ಷಾ ಕೇಂದ್ರದಲ್ಲಿ ನೀವು ಅಕ್ರಮ ಎಸಗಿರುವ ಬಗ್ಗೆ ಮಾಹಿತಿ ಬಂದಿದೆ. ನಾನು ಪರೀಕ್ಷೆಯ ವಿಶೇಷ ಅಧಿಕಾರಿಯಾಗಿದ್ದೇನೆ’ ಎಂದು ಬೆದರಿಸಿದ್ದರು. ಇದರಿಂದ ಗಾಬರಿಯಾದ ದಂದೆಕೋರರು,₹ 10 ಲಕ್ಷ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಮೇತ್ರೆ: ಕಲಬುರಗಿಯ ಬೆರಳಚ್ಚು ವಿಭಾಗದ ಇನ್‌ಸ್ಪೆಕ್ಟರ್‌ ಆಗಿದ್ದ ಬಂಧಿತ ಆರೋಪಿ ಆನಂದ ಮೇತ್ರೆ, ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಬಹಿರಂಗ ಮಾಡಿ ಅದನ್ನು ದಂದೆಕೋರರಿಗೆ ತಲುಪಿಸಿದ ಆರೋಪ ಕೇಳಿ ಬಂದಿದೆ. ನುರಿತ ತಂಡವೊಂದು ಉತ್ತರಗಳನ್ನು ಸಿದ್ಧಪ‍ಡಿಸಿದ ಬಳಿಕ ವಾಪಸ್ ಪರೀಕ್ಷಾ ಕೇಂದ್ರಕ್ಕೆ ತಂದು ತಮಗೆ ಬೇಕಾದವರಿಗೆ ಕೊಡುತ್ತಿದ್ದರು ಎಂದು ಗೊತ್ತಾಗಿದೆ.

ತಾವು ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡ ಅಧಿಕಾರಿ ಎಂದು ಹೇಳಿಕೊಂಡು ಕೇಂದ್ರದೊಳಗೆ ಬರುತ್ತಿದ್ದರು. ಅವರು ತಲುಪಿಸಿದ ಉತ್ತರಗಳನ್ನು ಪರೀಕ್ಷೆ ಮುಗಿದ ನಂತರ ಕೊಠಡಿ ಮೇಲ್ವಿಚಾರಕಿಯರು ಒಎಂಆರ್‌ ಶೀಟ್‌ನಲ್ಲಿ ತುಂಬಿದ್ದರು. ಮತ್ತೊಂದೆಡೆ ಬ್ಲೂಟೂತ್ ಮೂಲಕ ಉತ್ತರ ಹೇಳಲಾಗಿತ್ತು. ರುದ್ರಗೌಡ ಪಾಟೀಲ ಹೇಳಿದಂತೆ ನಡೆದುಕೊಂಡಿದ್ದರು ಎಂಬ ಆರೋಪ‍ ಕೇಳಿ ಬಂದಿದೆ.

ಆನಂದ ಮೇತ್ರೆ ಅವರು ಕೆಲಸ ಮಾಡಿದ ಹಾಗೂ ಸಂಬಂಧಿಕರನ್ನು ಹೊಂದಿರುವ ವಿಜಯಪುರ ಜಿಲ್ಲೆಯ ವಿವಿಧ ಕಡೆ ಸಿಐಡಿ ತಂಡ ಶುಕ್ರವಾರ ತೆರಳಿ ಮಾಹಿತಿ ಸಂಗ್ರಹಿಸಿದೆ.

‘ಜೈಲಿನಿಂದಲೇ ಅಪರಾಧ ಕೃತ್ಯ’
ಕಲಬುರಗಿ: ‘ಅಪರಾಧ ಎಸಗಿದವರನ್ನು ಜೈಲಿಗೆ ಹಾಕಲಾಗುತ್ತದೆ. ಆದರೆ, ಕಾರಾಗೃಹದಲ್ಲಿ ಇದ್ದುಕೊಂಡೇ ಕೈದಿಗಳು ಅಪರಾಧ ಎಸಗುತ್ತಿದ್ದು, ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶುಕ್ರವಾರ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೈದಿಗಳು ಮೊಬೈಲ್ ಫೋನ್ ಮೂಲಕ ಹಫ್ತಾ ವಸೂಲಿಯಂತಹ ದಂಧೆಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕಲಾಗುವುದು. ಅಲ್ಲದೆ, ಕೈದಿಗಳಿಗೆಗೆ ಮೊಬೈಲ್ ಪೂರೈಸುವ ಜೈಲು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತ್ವರಿತಗತಿ ನ್ಯಾಯಾಲಯಕ್ಕೆ ಚಿಂತನೆ
ಕಲಬುರಗಿ: ‘545 ಪಿಎಸ್ಐ ನೇಮಕಾತಿ ಹಗರಣದ ತ್ವರಿತ ವಿಚಾರಣೆ ನಡೆಸಿಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗುವುದು ಮತ್ತು ತ್ವರಿತಗತಿ ನ್ಯಾಯಾಲಯ ಆರಂಭಿಸುವ ಚಿಂತನೆಯೂ ಇದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶುಕ್ರವಾರ ಮಾತನಾಡಿದ ಅವರು, ‘ಅಕ್ರಮದಲ್ಲಿ ಸಿಲುಕಿಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸಲು ನಮ್ಮ ಸರ್ಕಾರ ಬದ್ಧ. ಅದಕ್ಕಾಗಿಯೇ ಪ್ರಕರಣದ ಮಾಹಿತಿ ಬಂದ 2 ಗಂಟೆಗಳಲ್ಲಿಯೇ ಸಿಐಡಿ ತನಿಖೆಗೆ ಆದೇಶಿಸಿದೆವು. ಆದೇಶ ಹೊರಬಿದ್ದ ದಿನವೇ ತನಿಖಾಧಿಕಾರಿ ಹಾಗೂ ಅವರ ಸಿಬ್ಬಂದಿ ಕಲಬುರಗಿಗೆ ಬಂದರು’ ಎಂದರು.

ರುದ್ರಗೌಡ ಬ್ಯಾಂಕ್‌ ಖಾತೆ ಅಮಾನತು
ಪ್ರಕರಣದ ಪ್ರಮುಖ ಕಿಂಗ್‌ಪಿನ್ ಎನ್ನಲಾದ ರುದ್ರಗೌಡ ಪಾಟೀಲ ಅವರ ಎರಡು ಖಾಸಗಿ ಬ್ಯಾಂಕ್‌ಗಳ ಖಾತೆಗಳನ್ನು ಅಮಾನತಿನಲ್ಲಿರಿಸಲಾಗಿದೆ. ಅವರ ಹೆಸರಿನಲ್ಲಿದ್ದ ಮ್ಯೂಚುವಲ್ ಫಂಡ್‌ಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರುದ್ರಗೌಡ ಅವರ ಸಿಐಡಿ ಕಸ್ಟಡಿಯನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.