ADVERTISEMENT

ಪಿಎಸ್‌ಐ ಅಕ್ರಮ: ತೋಟದ ಮನೆ ಕಡೆ ಸಿಐಡಿ ಕಣ್ಣು

ಒಎಂಆರ್‌ ತಿದ್ದಲು ಗೋಪ್ಯ ಸ್ಥಳ l ಮೊಬೈಲ್‌ ಸ್ವಿಚ್ಡ್‌ ಆಫ್‌ ರಹಸ್ಯ

ಸಂತೋಷ ಜಿಗಳಿಕೊಪ್ಪ
Published 6 ಮೇ 2022, 20:10 IST
Last Updated 6 ಮೇ 2022, 20:10 IST
ಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ರೇವೂರ ಅವರನ್ನು ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದರು.
ಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ರೇವೂರ ಅವರನ್ನು ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದರು.   

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಎಸಗಲು ಕೆಲ ಅಭ್ಯರ್ಥಿಗಳು, ಬೆಂಗಳೂರು ಹೊರವಲಯದ ‘ಫಾರ್ಮ್‌ಹೌಸ್‌’ವೊಂದರಲ್ಲಿ ಒಎಂಆರ್ ಪ್ರತಿ ತಿದ್ದಿರುವ ಕುರಿತು ಸಂಶಯಪಟ್ಟಿರುವ ಸಿಐಡಿ ವಿಶೇಷ ತಂಡ ‘ಫಾರ್ಮ್‌ಹೌಸ್ ರಹಸ್ಯ’ ಭೇದಿಸಲು ಪುರಾವೆಗಳಿಗೆ ಶೋಧ ಆರಂಭಿಸಿದೆ.

ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ಹಾಗೂ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿದ್ದು, ಪೊಲೀಸರು ಸೇರಿ 49 ಮಂದಿಯನ್ನು ಸಿಐಡಿ ಬಂಧಿಸಿದೆ. ಬಹುತೇಕರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಕೆಲ ಅಭ್ಯರ್ಥಿಗಳು ‘ಫಾರ್ಮ್‌ಹೌಸ್‌’ ಬಗ್ಗೆ ಮಾಹಿತಿಯನ್ನು ಬಾಯಿ ಬಿಟ್ಟಿರುವುದಾಗಿ ಗೊತ್ತಾಗಿದೆ.

‘ಬೆಂಗಳೂರಿನ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು, ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಈಗಾಗಲೇ ಪುರಾವೆಗಳು ಸಿಕ್ಕಿವೆ. ಆದರೆ, ಬೆಂಗಳೂರಿನ ಬಹುತೇಕ ಕೇಂದ್ರಗಳಲ್ಲಿ ಪರೀಕ್ಷೆ ವೇಳೆ ಭದ್ರತೆ ಹೆಚ್ಚಿರುತ್ತದೆ. ಇಂಥ ಕೇಂದ್ರದಲ್ಲಿ ಒಎಂಆರ್‌ ತಿದ್ದುವುದು ಸುಲಭವಲ್ಲ. ಹೀಗಾಗಿ, ಅಭ್ಯರ್ಥಿಗಳು ಬೇರೆ ಕಡೆ ಒಎಂಆರ್‌ ತಿದ್ದಿರುವ ಅನುಮಾನವಿದೆ’ ಎಂದೂ ತಿಳಿಸಿವೆ.

ADVERTISEMENT

'ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳೆಲ್ಲರೂ, 2021ರ ಅಕ್ಟೋಬರ್ ಕೊನೆಯ ವಾರ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಮೊಬೈಲ್‌ಗಳನ್ನು ಸ್ವಿಚ್ ಆಫ್‌ ಮಾಡಿದ್ದು ತಾಂತ್ರಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳ ಮೊಬೈಲ್‌ಗಳು ಕೆಲ ದಿನಗಳ ನಂತರ ಸ್ವಿಚ್ಡ್ ಆಫ್‌ ಆಗಿದ್ದವು’ ಎಂದೂ ಮೂಲಗಳು ತಿಳಿಸಿವೆ.

‘ಈ ಕುರಿತ ಪ್ರಶ್ನೆಗಳಿಗೆ ಅಭ್ಯರ್ಥಿಗಳು ನಿಖರ ಮಾಹಿತಿ ನೀಡುತ್ತಿಲ್ಲ. ವೈಯಕ್ತಿಕ ಕಾರಣಕ್ಕೆ ಸ್ವಿಚ್ಡ್ ಆಫ್‌ ಮಾಡಿದ್ದಾಗಿ ತಿಳಿಸುತ್ತಿದ್ದಾರೆ. ಆದರೆ, ಎಲ್ಲರೂ ಒಂದೆಡೆ ಸೇರಿ ಸಾಮೂಹಿಕವಾಗಿ ಒಎಂಆರ್ ತಿದ್ದಿರುವ ಸಂಶಯ ದಟ್ಟವಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಕಾವಲು: ಪಿಎಸ್‌ಐ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಕೆಲ ಅಭ್ಯರ್ಥಿಗಳು, ಏಜೆಂಟರಿಗೆ ಹಣ ನೀಡಿದ್ದರು. ಆ ಹಣದಲ್ಲಿ ‘ಹಿರಿಯ ಸರ್‌’ಗೆ ಪಾಲು ಹೋಗಿತ್ತು ಎನ್ನಲಾಗಿದೆ. ಹಣ ಕೊಟ್ಟವರ ಆಯ್ಕೆಗೆ ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿತ್ತೆಂಬ ಮಾಹಿತಿಯೂ ಇದೆ.

‘ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಅ‌ಭ್ಯರ್ಥಿಗಳು, 100 ಪ್ರಶ್ನೆಗಳ ಪೈಕಿ ಮೂರ್ನಾಲ್ಕು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದರು. ಉಳಿದಂತೆ ಖಾಲಿ ಒಎಂಆರ್‌ ಪ್ರತಿಯನ್ನು ಮೇಲ್ವಿಚಾರಕರಿಗೆ ನೀಡಿದ್ದರು. ಅದೇ ಪ್ರತಿ, ಪೊಲೀಸ್ ನೇಮಕಾತಿ ವಿಭಾಗಕ್ಕೆ ಬಂದಿತ್ತು. ಏಜೆಂಟರ ಸೂಚನೆಯಂತೆ ಕೆಲದಿನ ಬಿಟ್ಟು ಅಭ್ಯರ್ಥಿಗಳು ಫಾರ್ಮ್‌ಹೌಸ್‌ವೊಂದರಲ್ಲಿ ಸೇರಿದ್ದರು. ಆ ಸಂದರ್ಭದಲ್ಲೇ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿದ್ದರು. ಅದೇ ಸ್ಥಳಕ್ಕೆ ಒಎಂಆರ್‌ ಪ್ರತಿ ತರಿಸಿಕೊಟ್ಟು, ಉಳಿದ ಉತ್ತರಗಳನ್ನು ಅಭ್ಯರ್ಥಿ
ಗಳಿಂದ ಭರ್ತಿ ಮಾಡಿಸಿದ್ದಾರೆ. ಇದಕ್ಕೆ ಕೆಲ ಪೊಲೀಸರು ಕಾವಲಾಗಿದ್ದ ಸಂಶಯವಿದೆ. ಈ ಮಾಹಿತಿಗೆ ಪೂರಕವಾಗಿ ಪುರಾವೆಗಳು ಸಿಗಬೇಕಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಮಂಗಳೂರು, ತುಮಕೂರಿನಲ್ಲೂ ಅಕ್ರಮ ಶಂಕೆ:ಬೆಂಗಳೂರು, ಕಲಬುರಗಿ ಮಾತ್ರವಲ್ಲದೇ ಮಂಗಳೂರು, ತುಮಕೂರು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡಗಳು, ಮಂಗಳೂರು ಹಾಗೂ ತುಮಕೂರಿಗೂ ಹೋಗಿ ತನಿಖೆ ಮಾಡುವ ಸಾಧ್ಯತೆ ಇದೆ.

46 ಅಭ್ಯರ್ಥಿಗಳಿಗೆ ನೋಟಿಸ್

ಅಕ್ರಮದಲ್ಲಿ ಭಾಗಿಯಾಗಿರುವ ಆರೋಪವುಳ್ಳ ಹಲವು ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ನಡೆದಿದೆ.

‘545 ಅಭ್ಯರ್ಥಿಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ. ಒಎಂಆರ್ ಪ್ರತಿಯಲ್ಲಿ ವ್ಯತ್ಯಾಸವಿರುವ ಹಾಗೂ ವಿಚಾರಣೆ ವೇಳೆ ಸೂಕ್ತ ದಾಖಲೆ ಹಾಜರುಪಡಿಸದ 46 ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

₹ 1 ಕೋಟಿ ನೀಡಿದ್ದ ಸಹೋದರರು:ಹೈಗ್ರೌಂಡ್ಸ್ ಠಾಣೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಿ.ಎಂ.ನಾರಾಯಣ್ ಹಾಗೂ ಸಿ.ಎಂ.ನಾಗರಾಜ್ ಸಹೋದರರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 18ಕ್ಕೆ ಏರಿದೆ.

‘ಕಗ್ಗಲಿಪುರದ ಚಿನ್ನಕುರ್ಚಿ ಗ್ರಾಮದ ನಾರಾಯಣ ಹಾಗೂ ನಾಗರಾಜ್, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ವಿಚಾರಣೆಗೆ ಬಂದಿದ್ದಾಗಲೇ ಅವರಿಬ್ಬರನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಲು ಸಹೋದರರು, ಮಧ್ಯವರ್ತಿಯಾಗಿದ್ದ ಎಂಜಿನಿಯರ್ ಮಂಜುನಾಥ್ ಮೇಳಕುಂದಿಗೆ ₹ 1 ಕೋಟಿ ನೀಡಿದ್ದರೆಂದು ಗೊತ್ತಾಗಿದೆ. ಸಹೋದರರು ಅಕ್ರಮವಾಗಿ ಆಯ್ಕೆಯಾಗಿದ್ದು, ಒಎಂಆರ್ ಪರಿಶೀಲನೆ ವೇಳೆ ಕಂಡುಬಂದಿತ್ತು. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.