ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದ ಪ್ರಕರಣ: ಮಾಹಿತಿ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 8:01 IST
Last Updated 11 ಏಪ್ರಿಲ್ 2023, 8:01 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ‘ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದ ಪ್ರಕರಣದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿರುವ 145 ಅಭ್ಯರ್ಥಿಗಳ ಪೈಕಿ ಎಷ್ಟು ಅಭ್ಯರ್ಥಿಗಳು ಯಾವ ರೀತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸ್ಪಷ್ಟ ವರದಿ ಸಲ್ಲಿಸಿ ಮತ್ತು ಅರ್ಜಿದಾರ ಅಭ್ಯರ್ಥಿಗಳ ಬಗ್ಗೆ ನಿಮ್ಮ ನಿಲುವನ್ನು ತಿಳಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ನಗರದ ವಸಂತ ನಾಯಕ್‌ ಸೇರಿದಂತೆ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿರುವ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪಿ.ಎಸ್‌. ರಾಜಗೋಪಾಲ್‌ ಮತ್ತು ಡಿ.ಆರ್‌. ರವಿಶಂಕರ್, ‘ಈ ಪ್ರಕರಣದಲ್ಲಿ ತನಿಖೆ ಶುರುವಾಗಿ ಏಪ್ರಿಲ್‌ 9ಕ್ಕೆ ಒಂದು ವರ್ಷ ತುಂಬಿದೆ. ಆದರೆ, ಅರ್ಜಿದಾರರಲ್ಲಿನ ಯಾರೊಬ್ಬರ ವಿರುದ್ಧವೂ ಕಪ್ಪುಚುಕ್ಕೆ ಇಲ್ಲ. ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಹವೂ ಇಲ್ಲ. ಸರ್ಕಾರ ಸಾರಾಸಗಟಾಗಿ ಎಲ್ಲ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನೂ ರದ್ದುಗೊಳಿಸಿರುವುದು ಅನ್ಯಾಯ. ಆದ್ದರಿಂದ, ಆರೋಪಗಳೇ ಇಲ್ಲದ ಅರ್ಜಿದಾರ ಅಭ್ಯರ್ಥಿಗಳು ತನಿಖೆಯ ಅಂತಿಮ ವರದಿಗೆ ಬದ್ಧರಾಗಿರತಕ್ಕದ್ದು ಎಂಬ ಷರತ್ತಿನ ಮೇಲೆ ಅವರನ್ನು ಉಳಿಸಿಕೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಹಿರಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ವಿಸ್ತೃತ ತನಿಖೆ ನಡೆಸುತ್ತಿದ್ದು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಬ್ಲೂ ಟೂತ್‌ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಮತ್ತು ನೇಮಕಾತಿ ವಿಭಾಗದಲ್ಲೇ ಒಎಂಆರ್‌ ಶೀಟ್‌ಗಳನ್ನು ತಿದ್ದಿರುವುದರ ತನಿಖೆ ಮುಂದುವರಿದಿದೆ. ಒಎಂಆರ್‌ ಶೀಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್) ವರದಿ ಪಡೆಯಲಾಗಿದೆ. ಬ್ಲೂ ಟೂತ್‌ ಬಳಕೆ ಮಾಡಿ ನಕಲು ಮಾಡಿರುವುದರ ಕುರಿತು ತನಿಖೆ ಪ್ರಗತಿಯಲ್ಲಿದೆ’ ಎಂದರು.

‘ಹಗರಣದ ಸೂತ್ರಧಾರ ಆರ್‌.ಡಿ.ಪಾಟೀಲ್‌ ಇದೊಂದೇ ಹಗರಣ ಮಾತ್ರವಲ್ಲದೆ, ಕೆಪಿಎಸ್‌ಸಿ, ಬೆಸ್ಕಾಂ (ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ), ನೀರಾವರಿ ಇಲಾಖೆಗಳಲ್ಲಿ ನಡೆದಿರುವ ನೇಮಕಾತಿ ಯಲ್ಲೂ ಅಕ್ರಮ ನಡೆಸಿರುವ ಆರೋಪ
ಗಳಿವೆ. ಹೀಗಾಗಿ, ತನಿಖಾ ವರದಿ ಅಂತಿಮಗೊಳಿಸಲು ಇನ್ನಷ್ಟು ಸಮಯ ಬೇಕು’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಲಾಗದು. ಅಮಾಯಕರ ದೃಷ್ಟಿಯಿಂದಲೂ ಪರಿಶೀಲನೆ ಮಾಡಬೇಕಿದೆ. ಬೇಕಾದರೆ ಅರ್ಜಿದಾರರ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ. ಆದರೆ, ನಾವು ಈ ಸಂಬಂಧ ಯಾವುದೇ ನ್ಯಾಯಾಂಗ ಆದೇಶ ಮಾಡಲು ಹೋಗುವುದಿಲ್ಲ. ಆದಾಗ್ಯೂ, ಅರ್ಜಿದಾರರ ವಿಷಯದಲ್ಲಿ ನಿಮ್ಮ ಸ್ಪಷ್ಟ ನಿಲುವು ಪ್ರದರ್ಶಿಸಬೇಕು. ಒಂದು ವೇಳೆ ಅರ್ಜಿದಾರರಲ್ಲಿ ಯಾರಾದರೂ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅಂತಹವರ ವಿರುದ್ಧ ತನಿಖೆ ಮುಂದುವರಿಸಬಹುದು. ಹೀಗಾಗಿ, ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಕೈಗೊಂಡಿರುವ ಪ್ರಗತಿ ವರದಿಯನ್ನು ಜೂನ್‌ 15ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.