ADVERTISEMENT

ಪಿಎಸ್‌ಐ ಅಕ್ರಮ: ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಅಭ್ಯರ್ಥಿ ಬಂಧನ

ತಂದೆ ಜೊತೆ ಪರಾರಿಗೆ ಯತ್ನ: : ಆರೋಪಿ ಜಾಗೃತ್‌ ಸಿಐಡಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 21:37 IST
Last Updated 2 ಜುಲೈ 2022, 21:37 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದ ಆರೋಪಿ ಎಸ್‌. ಜಾಗೃತ್‌ ಅವರನ್ನು ಸಿಐಡಿ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಜಾಗೃತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಈತನನ್ನು 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಒಎಂಆರ್‌ ಪ್ರತಿ ತಿದ್ದುಪಡಿ ಮಾಡಿಸಿ ರ‍್ಯಾಂಕ್ ಪಡೆದಿದ್ದ ಜಾಗೃತ್, ಅದಕ್ಕಾಗಿ ಲಕ್ಷಾಂತರ ರೂಪಾಯಿ ನೀಡಿರುವ ಮಾಹಿತಿ ಇದೆ. ಆತ ಯಾರಿಗೆಲ್ಲ ಹಣ ನೀಡಿದ್ದನೆಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಕಾರು ಬೆನ್ನಟ್ಟಿ ಬಂಧನ: ‘ಏ.30ರಿಂದ ನಾಪತ್ತೆಯಾಗಿದ್ದ ಜಾಗೃತ್, ನಿರೀಕ್ಷಣಾ ಜಾಮೀನು ಕೋರಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ. ಆದರೆ, ಜಾಮೀನು ಸಿಕ್ಕಿರಲಿಲ್ಲ. ಇದಾದ ನಂತರವೂ ಆತ ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಮೈಸೂರಿನಲ್ಲಿದ್ದ ಜಾಗೃತ್, ಗುತ್ತಿಗೆದಾರರೂ ಆಗಿರುವ ತಂದೆ ಜೊತೆ ಕಾರಿನಲ್ಲಿ ಶುಕ್ರವಾರ ಬೆಂಗಳೂರಿನತ್ತ ಬರುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ವಿಶೇಷ ತಂಡದ ಅಧಿಕಾರಿಗಳು, ಮೈಸೂರಿಗೆ ಹೋಗಿ ಕಾರ್ಯಾಚರಣೆ ಆರಂಭಿಸಿದ್ದರು.’

‘ಮೈಸೂರಿನಿಂದ ಹೊರಟಿದ್ದ ಜಾಗೃತ್‌ನ ಕಾರನ್ನು ಅಧಿಕಾರಿಗಳು ಹಿಂಬಾಲಿಸುತ್ತಿದ್ದರು. ಚನ್ನಪಟ್ಟಣ ಬಳಿ ಕಾರು ತಡೆಯಲು ಯತ್ನಿಸಿದ್ದರು. ಸಿಐಡಿ ಅಧಿಕಾರಿಗಳನ್ನು ಕಂಡ ಜಾಗೃತ್, ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಮುಖ್ಯ ರಸ್ತೆ ಬಿಟ್ಟು ಒಳರಸ್ತೆಗಳಲ್ಲಿ ಕಾರು ಚಲಾಯಿಸಿದ್ದ.’

‘ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದ ಸಿಐಡಿ ಅಧಿಕಾರಿಗಳು, ಅವರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಜಾಗೃತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಾರಿನಲ್ಲಿ ತಂದೆ ಸಹ ಇದ್ದರು. ಅಗತ್ಯವಿದ್ದರೆ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

ಬಂಧನಕ್ಕೆ ವಾರೆಂಟ್: ತಲೆ ಮರೆಸಿಕೊಂಡಿರುವ ಅಭ್ಯರ್ಥಿಗಳಾದ ರಚನಾ ಹನುಮಂತ, ಜಿ.ಶಿವರಾಜ್ ಸೇರಿ ನಾಲ್ವರ ಬಂಧನಕ್ಕೆ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.