ADVERTISEMENT

ಪಿಟಿಸಿಎಲ್‌ ಜಮೀನು ಭೂಪರಿವರ್ತನೆ: ಜಿಲ್ಲಾಧಿಕಾರಿಗಳಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 15:57 IST
Last Updated 6 ನವೆಂಬರ್ 2022, 15:57 IST

ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) (ಪಿಟಿಸಿಎಲ್‌) ಕಾಯ್ದೆ ಅಡಿಯಲ್ಲಿ ಮಂಜೂರಾದ ಜಮೀನುಗಳಲ್ಲಿ ನಾಲ್ಕು ಗುಂಟೆಯವರೆಗೂ ಸ್ವಂತ ವಾಸದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಕಂದಾಯ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿದೆ.

ರಾಜ್ಯ ಸರ್ಕಾರದ ವಿರುದ್ಧ ಮುನ್ನಯ್ಯ ಮತ್ತು ಇತರರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪಿಟಿಸಿಎಲ್‌ ಕಾಯ್ದೆಯ ವ್ಯಾಪ್ತಿಯಲ್ಲಿರುವ ಜಮೀನುಗಳನ್ನು ಪರಭಾರೆ ಮಾಡಲು ಮುಕ್ತ ಅವಕಾಶ ನೀಡಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಭೂರಹಿತರಾಗಲು ಕಾರಣವಾಗುತ್ತದೆ ಎಂದು ಹೇಳಿತ್ತು. ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದೇ ಇಂತಹ ಜಮೀನುಗಳನ್ನು ಭೂಪರಿವರ್ತನೆ ಮಾಡುವಂತಿಲ್ಲ ಎಂದು 2021ರ ಜುಲೈ 5ರಂದು ಆದೇಶ ಹೊರಡಿಸಿತ್ತು.

ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಯಲ್ಲಿರುವ ಜಮೀನುಗಳ ಮಾಲೀಕರು ಸ್ವಂತ ವಾಸದ ಉದ್ದೇಶ ಹಾಗೂ ವಾಣಿಜ್ಯ ಉದ್ದೇಶಕ್ಕೆ 10 ಸೆಂಟ್ಸ್‌ ಅಥವಾ ನಾಲ್ಕು ಗುಂಟೆಯವರೆಗೆ ಬಳಸಿಕೊಳ್ಳುವುದಕ್ಕೆ ಪೂರಕವಾಗಿ ಭೂಪರಿವರ್ತನೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳಿಗೆ ನೀಡುವಂತೆ ವಿಧಾನಸಭೆಯ ಭರವಸೆಗಳ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌ ಕಂದಾಯ ಸಚಿವ ಆರ್‌. ಅಶೋಕ ಅವರಿಗೆ ಮನವಿ ಸಲ್ಲಿಸಿದ್ದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಯ ಜಮೀನಿನಲ್ಲಿ ಹತ್ತು ಸೆಂಟ್ಸ್‌ ಅಥವಾ ನಾಲ್ಕು ಗುಂಟೆ ವಿಸ್ತೀರ್ಣವನ್ನು ಸ್ವಂತ ವಸತಿ ಉದ್ದೇಶಕ್ಕೆ ಸೀಮಿತವಾಗಿ ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಸದರಿ ಜಮೀನನ್ನು ಮಾರಾಟ ಮಾಡಲು ಸರ್ಕಾರದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕಿರುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.