
ಬೆಂಗಳೂರು: ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು 2026–27ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿರುವ ಸಂಘವು, ಹೆಚ್ಚುವರಿ ಉಪನ್ಯಾಸಕರ ತಾತ್ಕಾಲಿಕ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿ–ಉಪನ್ಯಾಸಕರ ಅನುಪಾತವನ್ನು ಈಗಿರುವ 320:1ರಿಂದ 180:1ಕ್ಕೆ ಪರಿಷ್ಕರಿಸಿದರೆ ‘ಹೆಚ್ಚುವರಿ’ ಇಲ್ಲವಾಗುತ್ತದೆ. ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ. ಈಗಿರುವ ಅನುಪಾತ ರಾಷ್ಟ್ರಮಟ್ಟದ ನೀತಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಶೈಕ್ಷಣಿಕ ಮಾನದಂಡಗಳಿಗೂ ವಿರುದ್ಧವಾಗಿದೆ. ರಾಜ್ಯದಲ್ಲಿ ಸಿಬಿಎಸ್ಇಗೆ ಸಮಾನಾಂತರವಾಗಿ ಪಠ್ಯಕ್ರಮ ಜಾರಿಗೆ ತರುತ್ತಿರುವ ಕಾರಣ ವಿದ್ಯಾರ್ಥಿ– ಉಪನ್ಯಾಸಕ ಅನುಪಾತವನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದೆ.
‘ವಿದ್ಯಾರ್ಥಿ–ಉಪನ್ಯಾಸಕರ ಅನುಪಾತವನ್ನು ಪರಿಷ್ಕರಿಸಿದ ನಂತರ ಹೆಚ್ಚುವರಿ ಉಪನ್ಯಾಸಕರ ಅಂತಿಮ ಪಟ್ಟಿ ಪ್ರಕಟಿಸಬೇಕು. ನಂತರವೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ಹಾಗೆ ಮಾಡದೆ ಇದ್ದರೆ ಉಪನ್ಯಾಸಕರಿಗೆ ತೊಂದರೆಯಾಗುತ್ತದೆ. ಆಡಳಿತಾತ್ಮಕ ಗೊಂದಲಗಳಿಗೆ ಕಾರಣವಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಪತ್ರದಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.