ADVERTISEMENT

ದ್ವಿತೀಯ ಪಿಯು ಮೌಲ್ಯಮಾಪನ ಅಬಾಧಿತ, ನಿಗದಿತ ಅವಧಿಯಲ್ಲಿ ಪೂರ್ಣ: ಸುರೇಶ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 14:29 IST
Last Updated 1 ಜೂನ್ 2020, 14:29 IST
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
ಶಿಕ್ಷಣ ಸಚಿವ ಸುರೇಶ್‌ ಕುಮಾರ್‌   

ಬೆಂಗಳೂರು: ರಾಜ್ಯದಲ್ಲಿ‌ ಎಂಟು ಜಿಲ್ಲೆಗಳ 34 ಕೇಂದ್ರಗಳಲ್ಲಿ ದ್ವಿತೀಯ ಪಿಯು ವಿವಿಧ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 6,500 ಉಪನ್ಯಾಸಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ವಿಜಯ ಹಾಗೂ ಎಸ್.ಎಸ್.ಎಂ.ಆರ್.ವಿ‌ ಕಾಲೇಜುಗಳಲ್ಲಿನ ಮೌಲ್ಯಮಾಪನ ಕೇಂದ್ರಗಳಿಗೆ ಇಂದು ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಪಿ.ಸಿ.ಎಂ.ಬಿ ಹಾಗೂ ಇನ್ನೂ ನಡೆದಿರದ‌‌ ಇಂಗ್ಲಿಷ್ ಪರೀಕ್ಷಾ ಪತ್ರಿಕೆ‌‌ ಹೊರತುಪಡಿಸಿ ಉಳಿದೆಲ್ಲ ವಿಷಯಗಳ‌ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿಯೂ ಉಪನ್ಯಾಸಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ವಲಯಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಸೇರಿದಂತೆ ಹಲವು ವ್ಯಕ್ತಿಗಳಿಗೆ ಮೌಲ್ಯಮಾಪನ ಪ್ರಕ್ರಿಯೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಸಾಮರ್ಥ್ಯವುಳ್ಳ‌ ಉಪನ್ಯಾಸಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಿನ‌ ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ADVERTISEMENT


ಪಿ.ಸಿ.ಎಂ.ಬಿ ವಿಷಯಗಳ ಮೌಲ್ಯಮಾಪನಕ್ಕೆ ಹೆಚ್ಚುವರಿ ಉಪನ್ಯಾಸಕರ‌ ಅಗತ್ಯತೆ ಇದ್ದು, ನಗರ ಕೇಂದ್ರಗಳಲ್ಲಿ ವಸತಿ, ಆಹಾರ‌ ಸೌಕರ್ಯಗಳ ಲಭ್ಯತೆ ಆಧಾರದ‌ ಮೇಲೆ ಆರಂಭ ದಿನಾಂಕ ನಿರ್ಧರಿಸಲಾಗುವುದೆಂದ ಸಚಿವ ಸುರೇಶ್ ಕುಮಾರ್, ಜೂನ್ 18ರಂದು ನಡೆಯಲಿರುವ ಇಂಗ್ಲಿಷ್ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ‌ ನಡೆಸಲು ಈಗಾಗಲೇ ಸೂಚನೆ‌ ನೀಡಲಾಗಿದೆ‌ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.