
ವಿದ್ಯಾರ್ಥಿಗಳು
ಬೆಂಗಳೂರು: ರಾಜ್ಯದಲ್ಲಿ ಪದವಿಪೂರ್ವ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಪ್ರಥಮ ಪಿಯುಸಿಯ ಸೀಟುಗಳ ಸಂಖ್ಯೆ ಪ್ರತಿವರ್ಷ ಏರಿಕೆಯಾಗುತ್ತಿದೆ. ಹೀಗಾಗಿ, ಈ ಸಾಲಿನಲ್ಲಿ ಪಿಯುಸಿಗೆ 1.18 ಲಕ್ಷ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ.
ಐದು ವರ್ಷಗಳಲ್ಲಿ ಖಾಸಗಿ ಕಾಲೇಜುಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪ್ರಸ್ತುತ 3,623 ಖಾಸಗಿ ಕಾಲೇಜುಗಳಿವೆ. ನಿಗದಿತ ಪಠ್ಯದ ಜತೆಗೆ ಕಾಲೇಜುಗಳಲ್ಲೇ ನೀಟ್, ಸಿಇಟಿ, ಜಿಇಇ ಕೋರ್ಸ್‌ಗಳಿಗೆ ತರಬೇತಿ ನೀಡುತ್ತಿರುವುದರಿಂದ ವಿಜ್ಞಾನ ವಿಷಯ ಓದುವ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ದುಬಾರಿ ಶುಲ್ಕ ವಿಧಿಸಿದರೂ ಪೋಷಕರು ಖಾಸಗಿ ಕಾಲೇಜುಗಳತ್ತ ಒಲವು ತೋರುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಮೇಲೆ ಬೀರುತ್ತಿದ್ದು, ಹಲವು ಕಾಲೇಜುಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶ ಪಡೆಯುವ ಬಾಲಕಿಯರಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಶುಲ್ಕ ಮರುಪಾವತಿ ಮಾಡುತ್ತಿದೆ. ಬಹುತೇಕ ಕಾಲೇಜುಗಳಲ್ಲಿ ಎರಡು ವರ್ಷಗಳಿಂದ ಉಚಿತವಾಗಿ ಸಿಇಟಿ, ನೀಟ್, ಜೆಇಇ ಕೋರ್ಸ್‌ಗಳಿಗೆ ಉಚಿತ ತರಬೇತಿ ನೀಡಲು ವ್ಯವಸ್ಥೆ ಮಾಡಿದೆ. ಹಲವು ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಲ್ಯಾಬ್ ಸೌಲಭ್ಯ ಕಲ್ಪಿಸಲಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸ್ಪರ್ಧಾಪರೀಕ್ಷೆಗಳ ಮೂಲಕ ಪ್ರತಿಭಾವಂತರನ್ನು ಆಯ್ಕೆ ಮಾಡಿ ವಿವಿಧ ವಿಷಯಗಳ ಉಪನ್ಯಾಸಕರಾಗಿ ನೇಮಕ ಮಾಡಿದೆ. ಆದರೂ, ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫಲವಾಗುತ್ತಾ ಸಾಗಿವೆ. ಗಮನ ಸೆಳೆಯುವ ಪೀಠೋಪಕರಣ, ದುಬಾರಿ ಶುಲ್ಕ, ಪಠ್ಯ–ವಿವಿಧ ಪ್ರವೇಶ ಪರೀಕ್ಷಾ ತರಬೇತಿಗಷ್ಟೇ ಗಮನ ನೀಡುತ್ತಿರುವ ಖಾಸಗಿ ಕಾಲೇಜುಗಳತ್ತ ವಿದ್ಯಾರ್ಥಿ–ಪೋಷಕರು ಆಕರ್ಷಿತರಾಗುತ್ತಿರುವುದು ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರ ಧೃತಿಗೆಡಿಸಿದೆ.
‘ಸೇವೆಯ ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರದ ಸರಕಾಗಿಸಿಕೊಂಡಿರುವ ಖಾಸಗಿ ಕಾಲೇಜುಗಳ ಶೈಕ್ಷಣಿಕ ಮಾಫಿಯಾಕ್ಕೆ ತಡೆ ಹಾಕಬೇಕು. ಅಧಿಕ ಶುಲ್ಕ ವಸೂಲಿ ಮಾಡುವ ಮೂಲಕ ಪೋಷಕರನ್ನು ಸಾಲದ ಸುಳಿಗೆ ತಳ್ಳುತ್ತಿರುವ, ವೈದ್ಯಕೀಯ–ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ತರಬೇತಿ ನೀಡುವ ನೆಪದಲ್ಲಿ ಅಧಿಕ ಅಂಕಗಳಿಕೆಗಾಗಿ ಒತ್ತಡ ಹಾಕುವ, ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಲಾಭಕ್ಕಾಗಿ ಕೆಲಸ ಮಾಡುತ್ತಾ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆಗೆ ಕಾರಣವಾಗಿರುವ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.