ADVERTISEMENT

ಪಿಯುಸಿ: ಸಮವಸ್ತ್ರ ಕಡ್ಡಾಯವಲ್ಲ

ಅನಗತ್ಯ ಹೊರೆ ಹಾಕದಂತೆ ಕಾಲೇಜುಗಳಿಗೆ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 2:06 IST
Last Updated 18 ಮೇ 2019, 2:06 IST
   

ಬೆಂಗಳೂರು: ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

ಹಲವು ಅನುದಾನರಹಿತ ಪಿಯು ಕಾಲೇಜುಗಳು ಸಮವಸ್ತ್ರ ಕಡ್ಡಾಯಗೊಳಿಸಿದ್ದು, ಇದರಿಂದ ಹಣಕಾಸಿನ ಹೊರೆ ಉಂಟಾಗಿದೆ ಎಂಬ ದೂರು ಕೇಳಿಬಂದ ಮೇರೆಗೆ ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸದಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ನಿಯಮವನ್ನು ಉಲ್ಲಂಘಿಸಿದ ಕಾಲೇಜುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ. ‘2019–20ನೇ ಸಾಲಿನ ತರಗತಿಗಳು ಮೇ 20ರಿಂದ ಆರಂಭವಾಗಲಿದ್ದು, ಸಮವಸ್ತ್ರ ಧರಿಸುವಂತೆ ವಿದ್ಯಾರ್ಥಿಗಳನ್ನು ಕೇಳುವುದು ಕಾನೂನುಬಾಹಿರ. ಇದನ್ನು ಮೀರಿ ನಡೆದ ಕಾಲೇಜುಗಳು ಕ್ರಮ ಎದುರಿಸಲೂ ಸಿದ್ಧವಾಗಬೇಕು’ ಎಂದು ತಿಳಿಸಲಾಗಿದೆ.

ADVERTISEMENT

ಹಲವು ಖಾಸಗಿ ಅನುದಾನರಹಿತ ಕಾಲೇಜುಗಳು ಹಲವಾರು ವರ್ಷಗಳಿಂದ ಸಮವಸ್ತ್ರ ಕಡ್ಡಾಯಗೊಳಿಸಿವೆ. ಉದಾಹರಣೆಗೆ ನಗರದ ಸಿಎಂಆರ್‌ ಪಿಯು ಕಾಲೇಜು 20 ವರ್ಷಗಳ ಹಿಂದೆಯೇ ಸಮವಸ್ತ್ರ ಕಡ್ಡಾಯಗೊಳಿಸಿತ್ತು. ಸರ್ಕಾರದ ಈ ಸುತ್ತೋಲೆಯನ್ನು ಹಲವು ಕಾಲೇಜುಗಳ ಆಡಳಿತ ಮಂಡಳಿಗಳು ಪ್ರಶ್ನಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಸಮಸ್ಯೆ ಆಗಿಲ್ಲದಿರುವಾಗ ಇಲಾಖೆ ಮಧ್ಯಪ್ರವೇಶಿಸುವ ಅಗತ್ಯ ಏನು ಎಂದು ಕೇಳಿವೆ.

ಸಮವಸ್ತ್ರ ಹೆಸರಲ್ಲಿ ಕೆಲವು ಕಾಲೇಜುಗಳು ₹ 7 ಸಾವಿರ ತನಕ ಹಣ ವಸೂಲಿ ಮಾಡುತ್ತಿವೆ ಎಂಬ ದೂರು ಬಂದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ, ಇಂತಹ ಸುಲಿಗೆಯನ್ನು ನಿಲ್ಲಿಸಲೇಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪನ್ಯಾಸಕರು 15 ನಿಮಿಷ ಮುನ್ನ ಬರಬೇಕು

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ವಿದ್ಯಾರ್ಥಿಗಳು ಬರುವುದಕ್ಕೆ ಮೊದಲಾಗಿಯೇ ಕಾಲೇಜುಗಳಿಗೆ ಬರಬೇಕು ಎಂಬ ಮಾರ್ಗಸೂಚಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ತನ್ನ ಪ್ರವೇಶ ಮಾರ್ಗಸೂಚಿಯಲ್ಲಿ ತಿಳಿಸಿದೆ. ‘ಪ್ರತಿ ದಿನ ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಉಪನ್ಯಾಸಕರು ಕಾಲೇಜಿನಲ್ಲಿರಬೇಕು ಮತ್ತು ತಮ್ಮ ಹಾಜರಾತಿ ಪ್ರಕ್ರಿಯೆಗಳನ್ನು ಕೊನೆಗೊಳಿಸಬೇಕು’ ಎಂದು ತಿಳಿಸಲಾಗಿದೆ.

ಕಾಲೇಜುಗಳಿಗೆ ಗಂಟೆ ಹೊಡೆಯುವ ಸಮಯಕ್ಕೆ ಬರುವ ಉಪನ್ಯಾಸಕರು ತಮ್ಮ ಹಾಜರಾತಿ ಪ್ರಕ್ರಿಯೆಗಳಿಗೆ ಸಮಯ ತೆಗೆದುಕೊಳ್ಳುತ್ತಾರೆ, ಇದರಿಂದ ಪಾಠಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಕಾರಣ ಈ ನಿಯಮ ರೂಪಿಸಲಾಗಿದೆ.

***

ಸಮವಸ್ತ್ರ ವಿಚಾರದಲ್ಲಿ ಅಧಿಕ ಹಣ ವಸೂಲಿಯಂತಹ ದೂರುಗಳು ಬಂದಲ್ಲಿ ಅಂತಹ ಕಾಲೇಜುಗಳ ವಿರುದ್ಧ ಕ್ರಮ ನಿಶ್ಚಿತ
- ಸಿ.ಶಿಖಾ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.