ADVERTISEMENT

ಕಂಠೀರವ ಸ್ಟುಡಿಯೊದ ಆವರಣದಲ್ಲಿ ಭಾನುವಾರ ಬೆಳಿಗ್ಗೆ 10ರೊಳಗೆ ಪುನೀತ್ ಅಂತ್ಯಕ್ರಿಯೆ

ನಸುಕಿನ 5.30ರಿಂದ 6.30ರ ಒಳಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 20:03 IST
Last Updated 30 ಅಕ್ಟೋಬರ್ 2021, 20:03 IST
ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಬಳಿ ಕಣ್ಣೀರಿಟ್ಟ ಸಹೋದರ ಶಿವರಾಜಕುಮಾರ್ (ಚಿತ್ರ:1) ಪುನೀತ್ ಅವರ ಪತ್ನಿ ಅಶ್ವಿನಿ ಅವರನ್ನು ನಟಿ ಉಮಾಶ್ರೀ ಸಮಾಧಾನಪಡಿಸಿದರು (ಚಿತ್ರ:2) ಅಂತಿಮ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ (ಚಿತ್ರ:3) –ಪ್ರಜಾವಾಣಿ ಚಿತ್ರಗಳು
ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಬಳಿ ಕಣ್ಣೀರಿಟ್ಟ ಸಹೋದರ ಶಿವರಾಜಕುಮಾರ್ (ಚಿತ್ರ:1) ಪುನೀತ್ ಅವರ ಪತ್ನಿ ಅಶ್ವಿನಿ ಅವರನ್ನು ನಟಿ ಉಮಾಶ್ರೀ ಸಮಾಧಾನಪಡಿಸಿದರು (ಚಿತ್ರ:2) ಅಂತಿಮ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ (ಚಿತ್ರ:3) –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೊದ ಆವರಣದಲ್ಲಿರುವ ಡಾ. ರಾಜ್‌ಕುಮಾರ್‌ ಸ್ಮಾರಕ ಬಳಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯ ಒಳಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಅಂತಿಮ ವಿಧಿವಿಧಾನಗಳು ನಡೆಯುವ ಸ್ಥಳಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಪುನೀತ್‌ ಅವರ ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದೇನೆ. ಅವರ ಇಚ್ಛೆಯಂತೆ ನಸುಕಿನ 5.30ರಿಂದ 6.30ರ ಒಳಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಲಿದೆ’ ಎಂದರು.

‘ಪಾರ್ಥಿವ ಶರೀರದ ಅಂತಿಮ ಯಾತ್ರೆಯ ವಾಹನವನ್ನು ಸಿದ್ಧಪಡಿಸಲಾಗಿದೆ. ಅಂತ್ಯಕ್ರಿಯೆ ನಡೆಯುವ ಜಾಗ ಇಕ್ಕಟ್ಟಾಗಿದ್ದು, ಅಲ್ಲಿ ಕುಟುಂಬಸ್ಥರಿಗೆ ಮತ್ತು ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಸ್ಟುಡಿಯೊದ ಹೊರಭಾಗದಲ್ಲಿ 12 ಕಡೆಗಳಲ್ಲಿ ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಅದರಲ್ಲಿ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸುವ ಮೂಲಕ ಅಭಿಮಾನಿಗಳು ಸಹಕರಿಸಬೇಕು’ ಎಂದೂ ಮನವಿ ಮಾಡಿದರು.

ADVERTISEMENT

‘ಪುನೀತ್‌ ನಿಧನರಾಗಿ ಭಾನುವಾರಕ್ಕೆ ಮೂರನೇ ದಿನ. ಹೀಗಾಗಿ, ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಆದಷ್ಟು ಬೇಗ ಮುಗಿಸಬೇಕಿದೆ. ಬಳಿಕ ಕುಟುಂಬಸ್ಥರು ಮನೆಗೆ ಹೋಗಿ, ಮರಳಿ ಆ ಸ್ಥಳಕ್ಕೆ ಬಂದು ಹಾಲು ತುಪ್ಪ ಬಿಡಬೇಕಿದೆ. ಹೀಗಾಗಿ, ಅಂತ್ಯಕ್ರಿಯೆ ನಡೆಯಲಿರುವ ಸ್ಥಳದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.

ಕಂಠೀರವ ಸ್ಟುಡಿಯೊದತ್ತ ಅಭಿಮಾನಿಗಳು: ಶನಿವಾರ ಬೆಳಿಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ, ಸಂಜೆಯೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದಿದ್ದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡಾ, ‘ಸಂಜೆಯೇ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದ್ದು, 5ರಿಂದ 5.30ರ ವೇಳೆಗೆ ಕಂಠೀರವ ಸ್ಟುಡಿಯೊ ತಲುಪಲಿದೆ’ ಎಂದಿದ್ದರು.

ಈ ಸುದ್ದಿ ಹರಡುತ್ತಿದ್ದಂತೆ ಪುನೀತ್‌ ಅಭಿಮಾನಿಗಳು ಕಂಠೀರವ ಸ್ಟುಡಿಯೊದತ್ತ ಸಾಗರೋಪಾದಿಯಲ್ಲಿ ಮುಖ ಮಾಡಿದ್ದರು. ಆದರೆ, ಅದಾಗಲೇ ಇಡೀ ಪರಿಸರವನ್ನು ಆವರಿಸಿಕೊಂಡಿದ್ದ ಪೊಲೀಸ್‌ ಪಡೆ, ಸ್ಟುಡಿಯೊ ಒಳಗಡೆ ಸಾರ್ವಜನಿಕರು ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಿತ್ತು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೊರೆಗುಂಟೆಪಾಳ್ಯ ಜಂಕ್ಷನ್‌ನಿಂ‌ದ ಕಂಠೀರವ ಸ್ಟುಡಿಯೊ ಕಡೆಗಿನ ರಸ್ತೆಯುದ್ದಕ್ಕೂ ಪುನೀತ್‌ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅನೇಕರು ಸ್ಟುಡಿಯೊದ ಆವರಣ ಗೋಡೆ, ಅಕ್ಕಪಕ್ಕದ ಕಟ್ಟಡಗಳು, ಮರಗಳನ್ನು ಹತ್ತಿ ನಿಂತಿದ್ದರು. ಅಂಥವರನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.

ಶನಿವಾರದ ಸಂಜೆಯ ಬದಲು ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸುತ್ತಿದ್ದಂತೆ ಸ್ಟುಡಿಯೊ ಸುತ್ತ ನೆರೆದಿತ್ತ ಜನ ನಿಧಾನವಾಗಿ ನಿರ್ಗಮಿಸಿದರು. ಆದರೆ, ಹೊರ ಜಿಲ್ಲೆಗಳಿಂದ ಬಂದ ಸಾವಿರಾರು ಅಭಿಮಾನಿಗಳು ಸ್ಟುಡಿಯೊ ಸುತ್ತಮುತ್ತವೇ ನೆರೆದಿದ್ದಾರೆ.ಅಂತ್ಯಕ್ರಿಯೆ ನಡೆಯಲಿರುವ ಸ್ಥಳವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸ್ಥಳೀಯ ಶಾಸಕರೂ ಆಗಿರುವ ಅಬಕಾರಿ ಸಚಿವ ಕೆ. ಗೋಪಾಲಯ್ಯ ಶನಿವಾರ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.