ADVERTISEMENT

ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿ: ಸರ್ಕಾರದಿಂದ ಮಾರ್ಗಸೂಚಿ

ಭೂಮಿ, ಕಾವೇರಿ, ಕರ್ನಾಟಕ ಉದ್ಯೋಗ ಮಿತ್ರ ತಂತ್ರಾಂಶಗಳ ಮಾರ್ಪಡಿಗೂ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 8:14 IST
Last Updated 16 ಜೂನ್ 2020, 8:14 IST
ಕೃಷಿ ಭೂಮಿ (ಸಾಂದರ್ಭಿಕ ಚಿತ್ರ)
ಕೃಷಿ ಭೂಮಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಜಮೀನು ಖರೀದಿಸಲು ಅನುಸರಿಸಬೇಕಾದ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

ರಾಜ್ಯ ಮಟ್ಟದ ಏಕ ಗವಾಕ್ಷಿ ಒಪ್ಪಿಗೆ ಸಮಿತಿ/ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗಳು ಅನುಮೋದಿಸಿದ ನಂತರವೇ ಅರ್ಜಿದಾರರಿಗೆ ಕರ್ನಾಟಕ ಭೂಸುಧಾರಣೆ ಕಾಯ್ದೆ 1961ರ ಕಲಂ 63, 79ಎ,79ಬಿ ಮತ್ತು 80 ರಿಂದ ವಿನಾಯ್ತಿ ದೊರೆಯುತ್ತದೆ.

ಮಾರ್ಗಸೂಚಿಗಳು

ADVERTISEMENT

* ಕೃಷಿ ಜಮೀನನ್ನು ಕೃಷಿಯೇತರ ಅಂದರೆ ಕೈಗಾರಿಕೆ ಉದ್ದೇಶಕ್ಕಾಗಿ ಕರ್ನಾಟಕ ಭೂಸುಧಾರಣೆ ಕಾಯ್ದೆ 1961 ಕಲಂ 109 ರಡಿ ಖರೀದಿಸಲು ಇಚ್ಛಿಸುವ ಕೈಗಾರಿಕೋದ್ಯಮಿಗಳು ಕರ್ನಾಟಕ ಉದ್ಯೋಗ ಮಿತ್ರ ವೆಬ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

* ಉದ್ಯಮಿಗಳು ಹೂಡಿಕೆ ಪ್ರಸ್ತಾವನೆಯಲ್ಲಿ ಕೋರಿಕೆ ಸಲ್ಲಿಸಿರುವ ಜಮೀನಿನ ದಾಖಲೆ ಮತ್ತು ವಿವರಗಳನ್ನು ಆನ್‌ಲೈನ್‌ ಮೂಲಕ ಉದ್ಯೋಗ ಮಿತ್ರ ಪೋರ್ಟಲ್‌ನಿಂದ ಸಂಬಂಧಿಸಿದ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಜಿಲ್ಲಾಧಿಕಾರಿ ವಾಸ್ತವಾಂಶ ಬಗ್ಗೆ ವರದಿ ಮತ್ತು ನಿಯಮಾನುಸಾರ ಭೂಪರಿವರ್ತನಾ ಶುಲ್ಕ ನಿಗದಿ ಮಾಡಿ 15 ದಿನಗಳಲ್ಲಿ ವರದಿ ನೀಡಬೇಕು.

* ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ನಂತರ ಅಥವಾ ನಿಗದಿತ ಅವಧಿಯಲ್ಲಿ ಮಾಹಿತಿ ಬರದೇ ಇದ್ದರೆ, ಉದ್ಯೋಗ ಮಿತ್ರ ಪೋರ್ಟಲ್‌ನಲ್ಲಿರುವ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಲ್ಯಾಂಡ್‌ ಆಡಿಟ್‌ ಕಮಿಟಿ ಮುಂದೆ ಮಂಡಿಸಬೇಕು.

* ಲ್ಯಾಂಡ್‌ ಆಡಿಟ್‌ ಕಮಿಟಿ ಅನುಮೋದಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಉದ್ಯೋಗ ಮಿತ್ರವು ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ/ ಎಸ್‌ಎಚ್‌ಎಲ್‌ಸಿಸಿ ಸಮಿತಿಗಳ ಮುಂದೆ ಮಂಡಿಸಬೇಕು.

* ಈ ಎರಡೂ ಸಮಿತಿಗಳಿಂದ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಕರ್ನಾಟಕ ಭೂಸುಧಾರಣೆ ಕಾಯ್ದೆ 1961ರ ಕಲಂ 109ರ ಅಡಿ ಆದೇಶ ನೀಡಲಾಗುತ್ತದೆ.

* ಹೀಗೆ ಹೊರಡಿಸುವ ಆದೇಶಗಳ ಆಧಾರದ ಮೇಲೆ ಸಂಬಂಧಪಟ್ಟ ಉಪನೋಂದಣಾಧಿಕಾರಿಗಳು ಜಮೀನು ನೋಂದಣಿ ಮಾಡಬೇಕು. ನೋಂದಣಿ ದಿನಾಂಕ ಗೊತ್ತುಪಡಿಸಲು ಹಾಗೂ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವನ್ನು ಕರ್ನಾಟಕ ಉದ್ಯೋಗ ಮಿತ್ರ ಪೋರ್ಟಲ್‌ನಲ್ಲಿ ನಿರ್ವಹಿಸಲು ಕಾವೇರಿ ಪೋರ್ಟಲ್‌ಗೆ ಜೋಡಣೆ ಮಾಡಬೇಕು.

*ಉದ್ಯಮಿಯು ಜಮೀನು ಖರೀದಿಸಿದ ಬಳಿಕ ಕಂದಾಯ ಇಲಾಖೆಯು ನಿಯಮಾನುಸಾರ ಭೂಮಿ ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ಹಕ್ಕು ಬದಲಾವಣೆ(ಮ್ಯುಟೇಷನ್‌) ಮಾಡಬೇಕು.

* ಈ ಎಲ್ಲ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಭೂಮಿ ತಂತ್ರಾಂಶ, ಕಾವೇರಿ ತಂತ್ರಾಂಶ, ಕಾವೇರಿ ತಂತ್ರಾಂಶ ಮತ್ತು ಉದ್ಯೋಗ ಮಿತ್ರ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.