ADVERTISEMENT

ಮೈಸೂರು ಮೇಯರ್‌ ಆಗಿ ಪುಷ್ಪಲತಾ ಜಗನ್ನಾಥ್‌, ಉಪಮೇಯರ್‌ ಆಗಿ ಶಫೀ ಅಹಮದ್‌ ಆಯ್ಕೆ 

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 8:47 IST
Last Updated 17 ನವೆಂಬರ್ 2018, 8:47 IST
ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್‌ ಹಾಗೂ ಉಪ ಮೇಯರ್‌ ಆಗಿ ಜೆಡಿಎಸ್‌ನ ಶಫೀ ಅಹಮದ್‌ ಆಯ್ಕೆಯಾಗಿದ್ದಾರೆ.
ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್‌ ಹಾಗೂ ಉಪ ಮೇಯರ್‌ ಆಗಿ ಜೆಡಿಎಸ್‌ನ ಶಫೀ ಅಹಮದ್‌ ಆಯ್ಕೆಯಾಗಿದ್ದಾರೆ.    

ಮೈಸೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರಿದೆ. ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್‌ ಅವರು ಮೇಯರ್ ಆಗಿಯೂ, ಜೆಡಿಎಸ್‌ನ ಶಫೀ ಅಹಮದ್‌ ಉಪಮೇಯರ್‌ ಆಗಿಯೂ ಆಯ್ಕೆಯಾದರು.

ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ 11ನೇ ವಾರ್ಡ್‌ನ ಪುಷ್ಪಲತಾ ಅವರು 48 ಸದಸ್ಯರ ಬೆಂಬಲ ಪಡೆದರು. 59ನೇ ವಾರ್ಡ್‌ನ ಸದಸ್ಯೆ ಬಿಜೆಪಿಯ ಸುನಂದಾ ಪಾಲನೇತ್ರ 24 ಮತಗಳನ್ನು ಪಡೆದರು.

ಕಾಂಗ್ರೆಸ್‌ನ 19, ಜೆಡಿಎಸ್‌ನ 18, ಬಿಎಸ್ಪಿಯ 1, ಪಕ್ಷೇತರ 4‌ ಸದಸ್ಯರಲ್ಲದೆ, ಇಬ್ಬರು ಶಾಸಕರು ಮತ್ತು 4 ವಿಧಾನ ಪರಿಷತ್ ಸದಸ್ಯರ ಬೆಂಬಲವನ್ನು ಪುಷ್ಪಲತಾ ಪಡೆದರು.

ADVERTISEMENT

31 ನೇ ವಾರ್ಡ್‌ನ ಸದಸ್ಯ ಶಫೀ ಅವರು 48ಸದಸ್ಯರ ಬೆಂಬಲ‌ ಪಡೆದು ಆಯ್ಕೆಯಾದರೆ, ಬಿಜೆಪಿಯ ಎಂ.ಸತೀಶ್‌ 24 ಮತಗಳನ್ನು ಪಡೆದರು.

ಒಪ್ಪಂದ ಸೂತ್ರ: ಒಪ್ಪಂದದ ಪ್ರಕಾರ ಪಾಲಿಕೆಯಲ್ಲಿಮೊದಲ ಹಾಗೂ ಮೂರನೇ ಅವಧಿಗೆ ಕಾಂಗ್ರೆಸ್, ಎರಡನೇ, ನಾಲ್ಕನೇ ಹಾಗೂ ಐದನೇ ಅವಧಿಗೆ ಜೆಡಿಎಸ್ ಪಕ್ಷದವರು ಮೇಯರ್ ಆಗಲಿದ್ದಾರೆ.

ಐದು ವರ್ಷಗಳ ಬಳಿಕ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ದೊರೆತಿದೆ. ಕಳೆದ ಅವಧಿಯಲ್ಲಿ ಜೆಡಿಎಸ್‌- ಬಿಜೆಪಿ ಜತೆಯಾಗಿ ಅಧಿಕಾರ ನಡೆಸಿದ್ದವು. ಐದೂ ವರ್ಷ ಮೇಯರ್‌ಪಟ್ಟವನ್ನು ಜೆಡಿಎಸ್ ತನ್ನದಾಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.