ADVERTISEMENT

PV Web Exclusive| ಆರ್ಥಿಕ ಮುಗ್ಗಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ

ಪದೇ ಪದೇ ಅನುದಾನ ಕಡಿತಗೊಳಿಸುತ್ತಿರುವ ರಾಜ್ಯ ಸರ್ಕಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಡಿಸೆಂಬರ್ 2020, 17:11 IST
Last Updated 19 ಡಿಸೆಂಬರ್ 2020, 17:11 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ: ಸಂಶೋಧನೆಯೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡು ಹುಟ್ಟಿಕೊಂಡಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ.

ವಿಶ್ವವಿದ್ಯಾಲಯಕ್ಕೆ ಪ್ರತಿವರ್ಷ ಸರಾಸರಿ ₹5 ಕೋಟಿ ಅಭಿವೃದ್ಧಿ ಅನುದಾನ ಬರುತ್ತದೆ. ಆದರೆ, ಅದು ಅಲ್ಲಿನ ಸಿಬ್ಬಂದಿಯ ವೇತನ ಪಾವತಿಗಷ್ಟೇ ಸೀಮಿತವಾಗಿದೆ. ಅನ್ಯ ಕಾರ್ಯಕ್ರಮ, ಯೋಜನೆ ಹಮ್ಮಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ.

ಅದರಲ್ಲೂ ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಯ ಅನುದಾನದಲ್ಲೂ ಸರ್ಕಾರ ಭಾರಿ ಕಡಿತ ಮಾಡುತ್ತ ಬಂದಿದೆ. ಸತತ ಎರಡು ವರ್ಷ ನೆರೆಯಿಂದ ರಾಜ್ಯದಲ್ಲಿ ಅಪಾರ ನಷ್ಟ ಉಂಟಾಗಿದೆ. ಈ ವರ್ಷ ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಕಾರಣಗಳನ್ನು ಕೊಟ್ಟು ಸರ್ಕಾರ ಅನುದಾನಕ್ಕೆ ಕತ್ತರಿ ಹಾಕಿದೆ.

ADVERTISEMENT

2020–21ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ₹50 ಲಕ್ಷ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ. ಈ ಪೈಕಿ ₹12.50 ಲಕ್ಷವಷ್ಟೇ ಬಿಡುಗಡೆಯಾಗಿದೆ. ಒಂದಿಲ್ಲೊಂದು ನೆಪವೊಡ್ಡಿ ಸರ್ಕಾರ ಅನುದಾನ ಕಡಿತ ಮಾಡುತ್ತಿರುವುದರಿಂದ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದೆ ಎಂಬ ಆರೋಪ ಆಡಳಿತ ನಡೆಸುವವರದು.

ರಾಜ್ಯದ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಕನ್ನಡ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಭಿನ್ನವಾದುದು. ಕನ್ನಡ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ, ಆದಾಯ ಹೀಗೆ ಪ್ರತಿಯೊಂದರಲ್ಲೂ ಭಿನ್ನವಾಗಿದೆ. ಇತರೆ ವಿಶ್ವವಿದ್ಯಾಲಯಗಳಿಗೆ ಬೇರೆ ಬೇರೆ ಆದಾಯದ ಮೂಲಗಳಿವೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ವಿವಿಧ ತರಗತಿಗಳು ಅದರ ವ್ಯಾಪ್ತಿಯ ಕಾಲೇಜಿನಲ್ಲಿ ನಡೆಯುತ್ತವೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವುದರಿಂದ ಪ್ರವೇಶ ಶುಲ್ಕ, ಅಭಿವೃದ್ಧಿ ಶುಲ್ಕ ಸೇರಿದಂತೆ ಇತರೆ ರೂಪದಲ್ಲಿ ಆದಾಯ ಬರುತ್ತದೆ. ಆದರೆ, ಕನ್ನಡ ವಿಶ್ವವಿದ್ಯಾಲಯ ಹಾಗಿಲ್ಲ.

ಕನ್ನಡ ವಿಶ್ವವಿದ್ಯಾಲಯ ಎಂ.ಫಿಲ್‌, ಎಂ.ಎ., ಪಿಎಚ್‌.ಡಿ ಸಂಯೋಜಿತ, ಡಿ.ಲಿಟ್‌. ಪದವಿಗಳನ್ನು ಕೊಡುತ್ತದೆ. ಇದರ ಅಡಿಯಲ್ಲಿ ಬರುವ ಮುಕ್ತ ವಿಶ್ವವಿದ್ಯಾಲಯವು ಡಿಪ್ಲೊಮಾ, ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತದೆ. ಆದರೆ, ಆ ಹಣ ಅದರ ಪಠ್ಯ ಸಿದ್ಧಪಡಿಸಲು ವೆಚ್ಚವಾಗುತ್ತದೆ. ಆದಾಯದ ಸಾಧ್ಯತೆಗಳು ತೀರ ಕಡಿಮೆ ಇವೆ. ಪ್ರತಿಯೊಂದಕ್ಕೂ ಸರ್ಕಾರವನ್ನು ನೆಚ್ಚಿಕೊಳ್ಳುವ ಅನಿವಾರ್ಯತೆ ವಿಶ್ವವಿದ್ಯಾಲಯಕ್ಕೆ ಇದೆ.

‘ಆರಂಭದಲ್ಲಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಉತ್ತಮ ರೀತಿಯಲ್ಲಿ ಅನುದಾನ ನೀಡಿತ್ತು. ಈ ಕಾರಣಕ್ಕಾಗಿಯೇ ಚಂದ್ರಶೇಖರ ಕಂಬಾರ, ಎಂ.ಎಂ. ಕಲಬುರ್ಗಿ ಸೇರಿದಂತೆ ನಂತರ ಬಂದ ಕುಲಪತಿಗಳು ವಿಶ್ವವಿದ್ಯಾಲಯವನ್ನು ಎತ್ತರಕ್ಕೆ ಬೆಳೆಸಲು ಸಾಧ್ಯವಾಯಿತು. ಆದರೆ, ಈಗಿನ ಸರ್ಕಾರಗಳು ಕನ್ನಡ ವಿಶ್ವವಿದ್ಯಾಲಯವನ್ನು ಇತರೆ ವಿಶ್ವವಿದ್ಯಾಲಯಗಳಂತೆ ಭಾವಿಸಿ ನಿರ್ಲಕ್ಷಿಸುತ್ತ ಬಂದಿವೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸಾಹಿತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದಿನ ರಾಜಕಾರಣಿಗಳಿಗೆ ಭಾಷೆ, ಸಾಹಿತ್ಯ, ನಾಡು, ನುಡಿಯ ಬಗ್ಗೆ ಕಾಳಜಿ ಇತ್ತು. ಆದರೆ, ಈಗಿನವರಿಗೆ ಅದು ಬಾಯಿಮಾತಿಗೆ ಸೀಮಿತವಾಗಿದೆ. ಹೆಚ್ಚಿನವರಿಗೆ ಓದಿನ ಹಿನ್ನೆಲೆ ಇಲ್ಲ. ಕನ್ನಡ ವಿಶ್ವವಿದ್ಯಾಲಯದ ಮಹತ್ವ ಎಷ್ಟಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಮಠ, ಮಂದಿರಗಳಿಗೆ ಹಿಂದೆ, ಮುಂದೆ ನೋಡದೆ ನೂರಾರು ಕೋಟಿ ಅನುದಾನ ಕೊಡುತ್ತಾರೆ. ಆದರೆ, ನಾಡಿನ ವಿದ್ವತ್ತಿನ ಪ್ರತೀಕವಾದ, ಭಾಷೆಗಾಗಿಯೇ ಜನ್ಮ ತಳೆದಿರುವ ವಿಶ್ವವಿದ್ಯಾಲಯದ ಏಳಿಗೆಯ ಪ್ರಶ್ನೆ ಬಂದಾಗ ಮೌನ ವಹಿಸುತ್ತಾರೆ’ ಎಂದರು.

‘ಸರ್ಕಾರದಿಂದ ಬರುವ ಅನುದಾನ ಸಿಬ್ಬಂದಿಯ ವೇತನಕ್ಕೆ ಖರ್ಚಾಗುತ್ತದೆ. ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ಹಣವೇ ಇಲ್ಲ. ಇತರೆ ವಿಶ್ವವಿದ್ಯಾಲಯಗಳಂತೆ ಕನ್ನಡ ವಿಶ್ವವಿದ್ಯಾಲಯ ಅಲ್ಲ. ಸರ್ಕಾರ ಅದನ್ನು ಮನದಟ್ಟು ಮಾಡಿಕೊಳ್ಳಬೇಕು. ಬದಲಾದ ಕಾಲಮಾನಕ್ಕೆ ತಕ್ಕಂತೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು, ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತದೆ’ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ಹೇಳಿದರು.

***
ಹೊಸ ಯೋಜನೆ ಹಾಕಿಕೊಳ್ಳಲು ಅನುದಾನವೇ ಇಲ್ಲ. ವಿಶ್ವವಿದ್ಯಾಲಯ ನಡೆಸಲು ಬಹಳ ಸಮಸ್ಯೆ ಆಗುತ್ತಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದ್ದು, ಉತ್ತಮ ಸ್ಪಂದನೆ ದೊರಕಿದೆ.
–ಪ್ರೊ.ಸ.ಚಿ. ರಮೇಶ, ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

**

ವಿ.ವಿ ಪರ ಟ್ವಿಟರ್‌ನಲ್ಲಿ ಅಭಿಯಾನ
‘ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಕೊಡದೆ ಸರ್ಕಾರ ನಿಧಾನವಾಗಿ ವಿಷವುಣಿಸಿ ಕೊಲ್ಲುತ್ತಿದೆ. ಅದನ್ನು ಎಲ್ಲರೂ ಒಗ್ಗಟ್ಟಾಗಿ ನಿಂತು ಉಳಿಸಿಕೊಳ್ಳಬೇಕಿದೆ’ ಎಂಬ ಬರಹದೊಂದಿಗೆ ಹಲವರು ಟ್ವಿಟರ್‌ ಅಭಿಯಾನ ನಡೆಸುತ್ತಿದ್ದಾರೆ. ಡಿ. 15ರಂದು ‘ಪ್ರಜಾವಾಣಿ’ ಆನ್‌ಲೈನ್‌ನಲ್ಲಿ ಪ್ರಕಟಗೊಂಡ ವರದಿ ಕೂಡ ಅದರೊಂದಿಗೆ ಟ್ಯಾಗ್‌ ಮಾಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಎ.ಎನ್‌. ನಟರಾಜಗೌಡ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಅದಕ್ಕೆ ವಿವಿಧ ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.