ADVERTISEMENT

ಕ್ವಾರಂಟೈನ್‌ಗೆ ಒಳಗಾಗದ ಸಚಿವ ಸದಾನಂದಗೌಡ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:31 IST
Last Updated 25 ಮೇ 2020, 20:31 IST
ಡಿ.ವಿ. ಸದಾನಂದ ಗೌಡ
ಡಿ.ವಿ. ಸದಾನಂದ ಗೌಡ   

ಬೆಂಗಳೂರು: ದೆಹಲಿಯಿಂದ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ದೆಹಲಿಯು ಹೆಚ್ಚಿನ ಅಪಾಯ ಸಂಭವಿಸಬಹುದಾದ (ಹೈ ರಿಸ್ಕ್‌) ವಲಯದಲ್ಲಿದೆ. ಇಂತಹ ಪ್ರದೇಶದಿಂದ ಬಂದವರು ಕಡ್ಡಾಯವಾಗಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ರಾಜ್ಯ ಸರ್ಕಾರದ ಕ್ವಾರಂಟೈನ್‌ ಮಾರ್ಗಸೂಚಿಯಲ್ಲಿದೆ.

ಕ್ವಾರಂಟೈನ್‌ಗೆ ಒಳಗಾಗದೇ ಇರುವುದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡರು,‘ನಾನು ಫಾರ್ಮಾ ಸಚಿವನೂ ಹೌದು. ಔಷಧ ಪೂರೈಕೆಯು ಅಗತ್ಯ ಸೇವೆಯಡಿ ಬರುತ್ತಿದ್ದು, ಎಲ್ಲ ರಾಜ್ಯಗಳಿಗೆ ಔಷಧಗಳನ್ನು ಪೂರೈಸಬೇಕಾಗುತ್ತದೆ. ನಾನು ಕ್ವಾರಂಟೈನ್‌ ಒಳಗಾದರೆ ಈ ಕೆಲಸ ಮಾಡಲು ತೊಂದರೆಯಾಗುತ್ತದೆ’ ಎಂದರು.

ADVERTISEMENT

‘ದೇಶದೆಲ್ಲೆಡೆ ಔಷಧ ಲಭ್ಯವಾಗದಿದ್ದರೆ ಅದು ಸರ್ಕಾರದ ವೈಫಲ್ಯ ಎನಿಸಿಕೊಳ್ಳುತ್ತದೆ. ಔಷಧ ಖಾತೆಯ ಸಚಿವನಾಗಿ ದೇಶದ ಪ್ರತಿ ಮೂಲೆಗೂ ನಾನು ಹೋಗಬೇಕಾಗುತ್ತದೆ. ಔಷಧ ಸಂಗ್ರಹದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ’ ಎಂದೂ ಅವರು ಸಮರ್ಥಿಸಿಕೊಂಡರು.

‘ದೆಹಲಿಯ ಏಮ್ಸ್‌ನಲ್ಲಿ ಸ್ವಯಂಪ್ರೇರಿತನಾಗಿ ಆರೋಗ್ಯ ತಪಾಸಣೆ ಮಾಡಿಸಿದ್ದೇನೆ. ದೆಹಲಿಯ ವಿಮಾನ ನಿಲ್ದಾಣದಲ್ಲಿಯೂ ತಪಾಸಣೆಗೆ ಒಳಗಾಗಿದ್ದೇನೆ. ನನ್ನ ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್‌ ಹಸಿರು ಸಂಕೇತವನ್ನು ತೋರಿಸುತ್ತಿದೆ. ಅಂದರೆ, ನಾನು ಸುರಕ್ಷಿತವಾಗಿದ್ದೇನೆ ಎಂದೇ ಅರ್ಥ’ ಎಂದು ಅವರು ವ್ಯಾಖ್ಯಾನಿಸಿದರು.

ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸದಾನಂದಗೌಡ ತಮ್ಮ ಕಾರನ್ನೇರಿ ಹೊರಟು. ನಂತರ, ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರೊಂದಿಗೆ ವಿಕಾಸಸೌಧದಲ್ಲಿ ಸಭೆ ನಡೆಸಿದರು.

ಕೋವಿಡ್‌ 19ಗೆ ಸಂಬಂಧಿಸಿದಂತೆ ಸರ್ಕಾರದ ವಕ್ತಾರರಾಗಿರುವ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌, ಸದಾನಂದಗೌಡರ ನಡೆಯನ್ನು ಸಮರ್ಥಿಸಿದ್ದು, ‘ಔಷಧ ಸಚಿವಾಲಯದ ಹೊಣೆ ಹೊತ್ತಿರುವ ಸದಾನಂದಗೌಡರು, ಕ್ವಾರಂಟೈನ್‌ ಮಾರ್ಗಸೂಚಿಗಳಿಂದ ಹೊರತಾಗಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.